ADVERTISEMENT

ಗ್ರಾಮೀಣ ಆವಾಸ ಯೋಜನೆ ಅಡಿ ₹540 ಕೋಟಿ ಬಿಡುಗಡೆ

ಪಿಟಿಐ
Published 15 ಜನವರಿ 2024, 15:46 IST
Last Updated 15 ಜನವರಿ 2024, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (ಪಿಎಂ– ಜನ್‌ಮನ್‌) ಅಡಿ ಗ್ರಾಮೀಣ ಆವಾಸ ಯೋಜನೆಯ ಮೊದಲ ಕಂತು ₹540 ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಿಡುಗಡೆ ಮಾಡಿದರು. 1 ಲಕ್ಷ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು.

ಕಲ್ಯಾಣ ಯೋಜನೆಗಳು ಪ್ರತಿಯೊಬ್ಬರನ್ನೂ ತಲುಪಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ದೇಶದ ಅತಿದೂರದ ಪ್ರದೇಶಗಳಿಗೂ ಕಲ್ಯಾಣ ಕಾರ್ಯಕ್ರಮಗಳು ತಲುಪಲಿವೆ ಎಂಬುದಾಗಿ ತಾವು ಗ್ಯಾರಂಟಿ ನೀಡುವುದಾಗಿ ಮೋದಿ ಅವರು ಈ ವೇಳೆ ಹೇಳಿದರು. 

ಕಳೆದ 10 ವರ್ಷಗಳಲ್ಲಿ, ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಹಲವು ಕಲ್ಯಾಣ ಕಾರ್ಯಕ್ರಮಗಳ ಬಜೆಟ್‌ ಮೊತ್ತವನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಆ ಸಮುದಾಯಕ್ಕೆ ಸೇರಿರುವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳಿಗಾಗಿ 500ಕ್ಕೂ ಹೆಚ್ಚು ‘ಏಕಲವ್ಯ ಮಾದರಿ ಶಾಲೆ’ಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯ ಅಂತಹ 90 ಶಾಲೆಗಳು ದೇಶದಲ್ಲಿವೆ. ಬುಡಕಟ್ಟು ಸಮುದಾಯಗಳಲ್ಲಿನ ಅತಿ ದುರ್ಬಲ ವರ್ಗಗಳಿಗೂ ಯೋಜನೆಗಳ ಲಾಭ ಸಿಗುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಈ ವಿಚಾರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಪಯುಕ್ತ ಸಲಹೆಗಳನ್ನು ನೀಡಿದ್ದಾಗಿ ಅವರು ಸ್ಮರಿಸಿದರು. ‘ಮುರ್ಮು ಅವರು ಬುಡುಕಟ್ಟು ಸಮುದಾಯದ ಹಿನ್ನೆಲೆಯಿಂದ ಬಂದಿರುವವರು. ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಲವಾರು ಬಾರಿ ಅವರು ನನ್ನೊಡನೆ ಚರ್ಚಿಸಿದ್ದಾರೆ’ ಎಂದರು.

‘ರಾಮನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಲ್ಲಿ ದೀಪಾವಳಿಯನ್ನೇ ಆಚರಿಸಲಾಗುತ್ತಿದೆ. ಅದೇರೀತಿ, ಮನೆ ನಿರ್ಮಿಸಲು ಮೊದಲ ಕಂತಿನಲ್ಲಿ ಹಣ ಪಡೆದ 1 ಲಕ್ಷ ಕುಟುಂಬಗಳೂ ಹಬ್ಬ ಆಚರಿಸುತ್ತಿವೆ. ಇದು ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿ’ ಎಂದು ಹರ್ಷ ವ್ಯಕ್ತಪಡಿಸಿದರು.

ಫಲಾನುಭವಿಗಳ ಜೊತೆ ಸಂವಾದ: ಕಾರ್ಯಕ್ರಮದಲ್ಲಿ ಅವರು ಪಿಎಂ– ಜನಮನ ಯೋಜನೆಯ ಕೆಲವು ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳಾದ ಅಡುಗೆ ಅನಿಲ ಸಂಪರ್ಕ, ವಿದ್ಯುತ್‌, ನಲ್ಲಿ ನೀರು, ವಸತಿಯಂಥ ಯೋಜನೆಗಳ ಪ್ರಯೋಜನ ಪಡೆದ ಬಳಿಕ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆ ಕುರಿತು ಫಲಾನುಭವಿಗಳು ಪ್ರಧಾನಿ ಜೊತೆ ಅನುಭವ ಹಂಚಿಕೊಂಡರು.

ಶಬರಿ ಉಲ್ಲೇಖ: ರಾಮಾಯಣದ ಶಬರಿ ಪಾತ್ರವನ್ನು ಈ ವೇಳೆ ಉಲ್ಲೇಖಿಸಿದ ಮೋದಿ ಅವರು, ‘ಶ್ರೀರಾಮನ ಕಥೆಯು ಶಬರಿ ಮಾತೆಯಿಲ್ಲದೇ ಸಂಪೂರ್ಣವಾಗುವುದಿಲ್ಲ. ರಾಜಕುಮಾರ ರಾಮನು ಮರ್ಯಾದಾ ಪುರುಷೋತ್ತಮ ರಾಮನಾಗಿ ಪರಿವರ್ತನೆ ಆಗುವುದರಲ್ಲಿ ಶಬರಿಯ ಪಾತ್ರ ಮಹತ್ವದ್ದು. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ವ್ರತ ಕೈಗೊಂಡಿರುವುದರಿಂದ ಶಬರಿಯನ್ನು ನೆನೆಯುವುದು ಸಹಜ’ ಎಂದು ಹೇಳಿದರು.

ಶಬರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ಮಹಿಳೆ ಎಂಬ ಉಲ್ಲೇಖ ರಾಮಾಯಣದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.