ADVERTISEMENT

ಶಾಹೀನ್ ಬಾಗ್ ಪ್ರತಿಭಟನೆ ಹಿಂದೆ ವಿರೋಧ ಪಕ್ಷಗಳ ಕುತಂತ್ರವಿದೆ: ಪ್ರಧಾನಿ ಮೋದಿ

ಏಜೆನ್ಸೀಸ್
Published 3 ಫೆಬ್ರುವರಿ 2020, 14:28 IST
Last Updated 3 ಫೆಬ್ರುವರಿ 2020, 14:28 IST
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮೊದಲ ಪ್ರಚಾರ ಭಾಷಣ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮೊದಲ ಪ್ರಚಾರ ಭಾಷಣ   

ನವದೆಹಲಿ: ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಕಾಕತಾಳೀಯವಲ್ಲ, ಬದಲಿಗೆ ವಿರೋಧಪಕ್ಷಗಳು ರಾಷ್ಟ್ರರಾಜಧಾನಿಯಲ್ಲಿ ನೆಲೆಸಿರುವ ಶಾಂತಿ ಕದಡಲು ನಡೆಸುತ್ತಿರುವ ಪ್ರಯೋಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿರೋಧಪಕ್ಷಗಳು ಯಾವಾಗಲೂ ಓಟ್ ಬ್ಯಾಂಕ್ ರಾಜಕಾರಣ ಮಾಡುವುದರಲ್ಲೇ ತೊಡಗಿವೆ. ಯಾವಾಗಲಾದರೂ ದೆಹಲಿ ಸುರಕ್ಷತೆ ಬಗ್ಗೆ, ದೆಹಲಿ ಅಭಿವೃದ್ಧಿ ಕುರಿತು ಚಿಂತಿಸಿರುವುದನ್ನು ನೋಡಿದ್ದೀರಾ. ಇಲ್ಲ. ಕೆಲ ದಿನಗಳಿಂದ ಶಾಹೀನ್ ಬಾಗ್, ಜಾಮೀಯಾ , ಸೀಲಾಂಪುರ್ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನೀವುಇದು ಕಾಕತಾಳೀಯ ಅಂತ ಅಂದುಕೊಂಡಿದ್ದೀರಾಇಲ್ಲ. ಇದು ವಿರೋಧ ಪಕ್ಷಗಳು ದೆಹಲಿ ಶಾಂತಿ ಕದಡಲು ನಡೆಸುತ್ತಿರುವಪ್ರಯೋಗ ಎಂದು ಕಾಂಗ್ರೆಸ್ ಹಾಗೂ ಅಮ್ ಆದ್ಮಿ ಪಕ್ಷಗಳ ವಿರುದ್ಧ ತೀವ್ರವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಸೋಮವಾರ ಬಿಜೆಪಿ ಪರಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಮಾತನಾಡಿದ ಅವರು, ಈ ಪ್ರತಿಭಟನೆ ಹಿಂದೆ ರಾಜಕೀಯ ಉದ್ದೇಶ ಇದೆ. ಇದರಿಂದ ಸಮಾಜದ ಶಾಂತಿಗೆ ಭಂಗವಾಗುವ ಬೆದರಿಕೆ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಅನುಮಾನಗಳು ಇದ್ದಲ್ಲಿ ಸರ್ಕಾರ ಸ್ಪಷ್ಟನೆ ನೀಡಿ, ಭರವಸೆ ನೀಡಿದ ನಂತರ ಪ್ರತಿಭಟನೆಗಳು ನಿಲ್ಲಬೇಕಾಗಿತ್ತು. ಆದರೆ, ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪಕ್ಷಗಳು ನಿಜವಾದ ಸಂಚನ್ನು ಮರೆ ಮಾಚುತ್ತಾ ರಾಜಕೀಯದ ಆಟವಾಡುವುದರಲ್ಲಿ ತೊಡಗಿವೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಕಳೆದ 50 ದಿನಗಳಿಂದ ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ನಂ.13 ಎ ರಸ್ತೆ ಬಂದ್ ಆಗಿದೆ. ಈ ರಸ್ತೆ ದೆಹಲಿ ಹಾಗೂ ನೊಯ್ಡಾ ಸಂಪರ್ಕ ಕಲ್ಪಿಸುತ್ತದೆ.

ಪ್ರತಿಭಟನಾಕಾರರುಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಇದನ್ನು ತಿರಸ್ಕರಿಸಿದೆ.

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 8ಕ್ಕೆ ಮತದಾನ ನಡೆಯಲಿದ್ದು, ಫೆಬ್ರವರಿ 11ಕ್ಕೆ ಎಣಿಕೆ ಕಾರ್ಯ ನಡೆಯಲಿದೆ. ಬಹಿರಂಗ ಪ್ರಚಾರ ಫೆ.6ಕ್ಕೆ ಅಂತ್ಯಗೊಳ್ಳಲಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

ಅಲ್ಲದೆ, ಈ ಬಾರಿ ಆಮ್ ಆದ್ಮಿ ಪಕ್ಷಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆಮ್ ಆದ್ಮಿ 70 ವಿಧಾನಸಭಾ ಕ್ಷೇತ್ರಗಳಲ್ಲಿ 67ರಲ್ಲಿ ಗೆಲುವು ಸಾಧಿಸುವ ಮೂಲಕ ಕಳೆದ ಬಾರಿದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.