ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಪ್ರತಿದಿನ ಹಿಂದೂ– ಮುಸ್ಲಿಂ ವಿಚಾರ ಪ್ರಸ್ತಾಪಿಸಿ ಸಮಾಜದಲ್ಲಿ ದ್ವೇಷ ಹರಡುತ್ತಿದ್ದು, ಅವರು ಸಾರ್ವಜನಿಕ ಜೀವನದಿಂದ ದೂರ ಸರಿಯಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆಗ್ರಹಿಸಿದ್ದಾರೆ.
ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೋದಿ ಅವರ ಉದ್ದೇಶಗಳು ಸರಿ ಇಲ್ಲ. ‘ಕೋಣ ತಗೊಂಡು ಹೋಗುತ್ತಾರೆ’, ಬಜೆಟ್‌ನಲ್ಲಿ ಶೇ 15 ಮುಸ್ಲಿಮರಿಗೆ ಮೀಸಲಿಡುತ್ತಾರೆ’... ಇಂಥ ವಿಚಾರಗಳನ್ನು ಹೇಳಿ ಸಮಾಜದಲ್ಲಿ ವಿಭಜನೆ ಸೃಷ್ಟಿಸುತ್ತಿದ್ದಾರೆ. ಮತ್ತೊಂದೆಡೆ, ಹಿಂದೂ ಮುಸ್ಲಿಂ ರಾಜಕಾರಣ ಮಾಡಿದರೆ ತಾನು ಸಾರ್ವಜನಿಕ ಜೀವನದಲ್ಲಿರಲು ಅರ್ಹ ಅಲ್ಲ ಎಂದು ಹೇಳುತ್ತಾರೆ. ನೀವು ಪ್ರತಿದಿನ ಅಂಥ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದರಿಂದ ಸಾರ್ವಜನಿಕ ಜೀವನ ತ್ಯಜಿಸಬೇಕು’ ಎಂದು ಪ್ರತಿಪಾದಿಸಿದರು.
ಮೋದಿ ಅವರ ಭಾಷಣಗಳನ್ನು ಅವರೇ ಒಮ್ಮೆ ಕೇಳಲಿ ಎಂದು ಸಲಹೆ ನೀಡಿದ ಖರ್ಗೆ, ‘ಅವರು ಸುಳ್ಳು ಹೇಳುತ್ತಿದ್ದಾರೆ’ ಎಂದರು. ‘ಕೊನೇ ಪಕ್ಷ, ತಾವು ಏನು ಹೇಳುತ್ತಾರೋ ಅದಕ್ಕೆ ಬದ್ಧರಾಗಿರಲಿ. ಒಂದು ಕಡೆ ಅವರು ಇಂಥ ವಿಚಾರ ಮಾತನಾಡುತ್ತಾರೆ. ಇನ್ನೊಂದು ಕಡೆ, ಹಿಂದೂ– ಮುಸ್ಲಿಂ ವಿಚಾರ ಪ್ರಸ್ತಾಪಿಸಿದರೆ ತಾನು ಸಾರ್ವಜನಿಕ ಜೀವನದಲ್ಲಿರಲು ಅರ್ಹರಲ್ಲ ಎನ್ನುತ್ತಾರೆ’ ಎಂದು ಟೀಕಿಸಿದರು.
‘ಎಲ್ಲರನ್ನೂ ಜತೆಗೆ ಕರೆದೊಯ್ಯುವ ಬಗ್ಗೆ ಮಾತನಾಡುವ ಅವರು ಮತ ವಿಭಜನೆ ಮಾಡುವುದಕ್ಕಾಗಿ ದ್ವೇಷ ಭಾಷಣ ಮಾಡುವುದನ್ನೂ ಮುಂದುವರೆಸುತ್ತಿದ್ದಾರೆ. ಸಂವಿಧಾನ ಅಥವಾ ಮುಸ್ಲಿಮರ ವಿರುದ್ಧ ಮಾತನಾಡುವುದನ್ನು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಆದಿವಾಸಿಗಳ ಮೇಲೆ ಮೂತ್ರ ಮಾಡಿದ ಘಟನೆಯನ್ನು ಅವರು ಎಂದಾದರೂ ಖಂಡಿಸಿದ್ದರೇ’ ಎಂದು ಪ್ರಶ್ನಿಸಿದರು.
‘ಚುನಾವಣೆಗಾಗಿ ಅವರು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಬಿಜೆಪಿಯು ಸಮಾಜದಲ್ಲಿ ದ್ವೇಷ ಹರಡುತ್ತಿದ್ದರೆ, ಕಾಂಗ್ರೆಸ್ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆದು, ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತದೆ’ ಎಂದು ಪ್ರತಿಪಾದಿಸಿದರು.
‘ಮೋದಿ ‘ಒನ್ ಮ್ಯಾನ್ ಶೋ’ ನೀಡಲು ಬಯಸುತ್ತಾರೆ. ಒಬ್ಬನೇ ವ್ಯಕ್ತಿ ಎಲ್ಲವನ್ನೂ, ಇಡೀ ದೇಶವನ್ನು ಮುನ್ನಡೆಸಬಹುದು ಎನ್ನುವುದು ಅವರ ಚಿಂತನೆ’ ಎಂದು ಅಭಿಪ್ರಾಯಪಟ್ಟರು.
‘ಯಾವುದೇ ಸಮುದಾಯದ ಮೇಲಿನ ಅನ್ಯಾಯವನ್ನು ತಡೆಯುವುದು ಓಲೈಕೆ ಅಲ್ಲ. ನಾವು ಏನು ಮಾಡಿದರೂ ಅದನ್ನು ಓಲೈಕೆ ಎಂದು ಬಿಂಬಿಸುತ್ತಾರೆ. ಬಡವರಿಗೆ ಸಹಾಯ ಮಾಡುವುದು ಅಥವಾ ವಿದ್ಯಾರ್ಥಿ ವೇತನ ಕೊಡುವುದು, ಮುಸ್ಲಿಮರಿಗೆ ವಿಶೇಷ ಶಾಲೆಗಳ ಮೂಲಕ ವಿದ್ಯಾಭ್ಯಾಸ ನೀಡುವುದು ಇವನ್ನೆಲ್ಲ ಓಲೈಕೆ ಎಂದು ಕರೆಯಬಾರದು. ಬಿಜೆಪಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಮಾತ್ರ ನಾನು ಹೇಳಲು ಬಯಸುತ್ತೇನೆ’ ಎಂದು ತಿಳಿಸಿದರು.
‘ನಾವು ಯಾವುದೇ ವ್ಯಕ್ತಿ ಅಥವಾ ಮೋದಿ ಅವರ ವಿರೋಧಿಗಳಲ್ಲ. ನಾವು ಅವರ ತಾತ್ವಿಕತೆಯ ವಿರೋಧಿಗಳು. ಅವರ ತಾತ್ವಿಕತೆಯು ಸಮಾಜವನ್ನು ವಿಭಜನೆ ಮಾಡಲು ಮತ್ತು ದಲಿತರು, ಹಿಂದುಳಿದವರನ್ನು ಯಥಾಸ್ಥಿತಿಯಲ್ಲಿಡಲು ಬಯಸುತ್ತಿದ್ದು, ಅವೆಲ್ಲ ನಿಲ್ಲಬೇಕಾಗಿದೆ’ ಎಂದು ಹೇಳಿದರು.
‘ಭ್ರಷ್ಟರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದರು’
ಭ್ರಷ್ಟರನ್ನು ಶಾಶ್ವತವಾಗಿ ಜೈಲಿನಲ್ಲಿಡುವುದಾಗಿ ಪ್ರಧಾನಿ ಹೇಳಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನ ಸೆಳೆದಾಗ ‘ಪ್ರಧಾನಿಗೆ ಅಂಥ ಆಸೆ ಇರಬಹುದು. ಆದರೆ ಅದಕ್ಕೆ ನ್ಯಾಯಾಲಯ ಒಪ್ಪಬೇಕಲ್ಲ’ ಎಂದು ಹೇಳಿದರು. ‘ಬಿಜೆಪಿಯು ಈ ಹಿಂದೆ ಭ್ರಷ್ಟರು ಎಂದು ಕರೆದಿದ್ದ ಕೆಲವರನ್ನು ಪಕ್ಷದೊಳಗೆ ಬರಮಾಡಿಕೊಂಡಿತು. ನಂತರ ಅದೇ ಮಂದಿ ಅವರ ತೊಡೆ ಮೇಲೆ ಕೂತರು. ಅವರಲ್ಲಿ ಕೆಲವರನ್ನು ಸಂಸದ ಕೆಲವರನ್ನು ಮುಖ್ಯಮಂತ್ರಿ ಮತ್ತೆ ಕೆಲವರನ್ನು ಸಚಿವರನ್ನಾಗಿ ಮಾಡಲಾಯಿತು’ ಎಂದು ಟೀಕಿಸಿದರು. ‘ಸಂವಿಧಾನದಲ್ಲಿ ಬರೆದಿರುವುದನ್ನು ಅವರು ತೆಗೆದು ಹಾಕಲು ಸಾಧ್ಯವಿಲ್ಲ. ಆದರೆ ಅದನ್ನು ಜಾರಿ ಮಾಡುವುದಿಲ್ಲ. ಪ್ರಜಾಪ್ರಭುತ್ವವನ್ನು ಕೂಡ ಅವರು ಒಪ್ಪಿಕೊಳ್ಳುವುದಿಲ್ಲ. ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಮಧ್ಯಪ್ರದೇಶ ಕರ್ನಾಟಕ ತೆಲಂಗಾಣ ಮಣಿಪುರ ಉತ್ತರಾಖಂಡ ಗೋವಾ ರಾಜ್ಯ ಸರ್ಕಾರಗಳನ್ನು ಉರುಳಿಸಿದರು. ಹೀಗಾಗಿಯೇ ನಾವು ಸಂವಿಧಾನ ಪ್ರಜಾಪ್ರಭುತ್ವನ್ನು ಉಳಿಸಬೇಕಿದೆ ಎಂದು ಹೇಳುತ್ತಿರುವುದು’ ಎಂದು ತಿಳಿಸಿದರು.
ಖರ್ಗೆ ಮಾತು...
* ಸಂವಿಧಾನ ಪ್ರಜಾಪ್ರಭುತ್ವವನ್ನು ಉಳಿಸಲು ಜನರು ಹೋರಾಟ ನಡೆಸುತ್ತಿದ್ದು ಅದರ ವಿಸ್ತರಣೆಯಾಗಿ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
* ಬಿಜೆಪಿಯು ನಿರಂತರವಾಗಿ ಜನರನ್ನು ಪ್ರಚೋದಿಸುತ್ತಿದ್ದು ರಾಮ ಮಂದಿರ ಹಿಂದೂ–ಮುಸ್ಲಿಂ ಭಾರತ–ಪಾಕಿಸ್ತಾನದ ಹೆಸರಿನಲ್ಲಿ ‘ಭಾವನಾತ್ಮಕವಾಗಿ ಲೂಟಿ’ ಮಾಡುತ್ತಿದೆ. ಆದರೆ ಜನ ಈಗ ಅದರ ನಿಜಬಣ್ಣವನ್ನು ಅರ್ಥ ಮಾಡಿಕೊಂಡಿದ್ದಾರೆ.
* ನಿರುದ್ಯೋಗ ಮತ್ತು ಬೆಲೆ ಏರಿಕೆ ಈ ಚುನಾವಣೆಯ ಎರಡು ಪ್ರಮುಖ ವಿಚಾರಗಳಾಗಿವೆ. ಬಿಜೆಪಿ ಹಿಂದೆ ಜನರಿಗೆ ಭರವಸೆ ನೀಡಿದಂತೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಕಪ್ಪು ಹಣ ವಾಪಸ್ ತರುವಲ್ಲಿ ಮತ್ತು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ವಿಫಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.