ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಾಂಗ್ಲಾದೇಶದ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಗರ್ವಾ ಜಿಲ್ಲೆಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು ಜಾರ್ಖಂಡ್‌ನಲ್ಲಿರುವ ಮೈತ್ರಿಕೂಟವನ್ನು ‘ಒಳನುಸುಳುಕೋರರ ಮೈತ್ರಿಕೂಟ’ ಹಾಗೂ ‘ಮಾಫಿಯಾಗಳ ಗುಲಾಮ’ ಎಂದು ಲೇವಡಿ ಮಾಡಿದ್ದಾರೆ.
‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರು ಹಗರಣ ಮಾಡುವುದನ್ನೇ ತಮ್ಮ ಉದ್ಯಮವನ್ನಾಗಿಸಿಕೊಂಡಿದ್ದು, ಭ್ರಷ್ಟಾಚಾರವು ಗೆದ್ದಲಿನಂತೆ ಇಡೀ ರಾಜ್ಯವನ್ನು ಟೊಳ್ಳಾಗಿಸಿದೆ’ ಎಂದು ಟೀಕಿಸಿದರು.
‘ಜಾರ್ಖಂಡ್‌ನಲ್ಲಿ ತುಷ್ಟೀಕರಣ ರಾಜಕಾರಣವು ಅದರ ಪರಾಕಾಷ್ಠೆ ತಲುಪಿದ್ದು, ಜೆಎಂಎಂ ನೇತೃತ್ವದ ಸರ್ಕಾರವು ಬಾಂಗ್ಲಾದೇಶದ ನುಸುಳುಕೋರರಿಗೆ ಬೆಂಬಲ ನೀಡುವಲ್ಲಿ ನಿರತವಾಗಿದೆ. ಇದು ಹೀಗೆಯೇ ಮುಂದುವರಿದರೆ ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆ ಕುಗ್ಗಲಿದೆ. ಇದರಿಂದ ಬುಡಕಟ್ಟು ಜನರಿಗೆ ಹಾಗೂ ದೇಶಕ್ಕೆ ಅಪಾಯವಿದೆ’ ಎಂದು ಎಚ್ಚರಿಸಿದರು.
‘ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿಯು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಮಿತಿಗಳನ್ನೂ ದಾಟಿವೆ. ಇದು ಬಡವರು, ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಸಮುದಾಯಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜಾರ್ಖಂಡ್ ಮುಖ್ಯಮಂತ್ರಿ, ಜೆಎಂಎಂ ನೇತೃತ್ವದ ಸರ್ಕಾರದ ಶಾಸಕರು ಮತ್ತು ಸಂಸದರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ’ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಗೆ ಮಂಜೂರು ಮಾಡಿರುವ ಸಾವಿರಾರು ಕೋಟಿ ರೂಪಾಯಿಗಳನ್ನು ಇಲ್ಲಿನ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಪ್ರಧಾನಿ ಅವರು ಈ ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದು. ಜಾರ್ಖಂಡ್ ವಿಧಾನಸಭೆಗೆ ಎರಡು ಹಂತಗಳಲ್ಲಿ (ನವೆಂಬರ್ 13 ಹಾಗೂ 20) ಮತದಾನ ನಡೆಯಲಿದೆ.
ಬಡವರಿಗೆ ದ್ರೋಹ ಬಗೆದಿರುವ ಜೆಎಂಎಂ ನೇತೃತ್ವದ ಮೈತ್ರಿಕೂಟವು ಈ ಚುನಾವಣೆಯೊಂದಿಗೆ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆನರೇಂದ್ರ ಮೋದಿ ಪ್ರಧಾನಿ
ಜೆಎಂಎಂ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಬಾಂಗ್ಲಾದೇಶದ ನುಸುಳುಕೋರರನ್ನು ‘ವೋಟ್ ಬ್ಯಾಂಕ್ ರಾಜಕೀಯ’ಕ್ಕೆ ಬಳಸಿಕೊಂಡಿವೆ ಎಂದು ಮೋದಿ ಆರೋಪಿಸಿದರು ‘ಇದು ನುಸುಳುಕೋರರ ನೆಲೆಯನ್ನು ಸುಗಮಗೊಳಿಸುತ್ತದೆಯಲ್ಲದೆ ರಾಜ್ಯದ ಸಾಮಾಜಿಕ ವ್ಯವಸ್ಥೆಗೆ ಅಪಾಯ ತಂದೊಡ್ಡುತ್ತದೆ’ ಎಂದರು. ‘ಶಾಲೆಗಳಲ್ಲಿ ಸರಸ್ವತಿ ವಂದನೆಗೆ ತಡೆಯೊಡ್ಡುತ್ತಾರೆ ಎಂದಾದರೆ ನಮ್ಮ ಸಮಾಜಕ್ಕೆ ಎದುರಾಗಿರುವ ಬೆದರಿಕೆಯ ಮಟ್ಟ ಏನೆಂಬುದನ್ನು ನಿಮಗೆ ಅರ್ಥಮಾಡಿಕೊಳ್ಳಬಹುದು. ದುರ್ಗಾಪೂಜೆಯಂತಹ ಹಬ್ಬಗಳ ಸಮಯದಲ್ಲಿ ಕರ್ಫ್ಯೂ ಹೇರುವುದು ಸಾಮಾನ್ಯವಾಗಿದೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.