ನವದೆಹಲಿ: ಪುನರ್ ಅಭಿವೃದ್ಧಿಪಡಿಸಲಾದ ಮತ್ತು ಹೆಸರು ಬದಲಿಸಲಾದ ಕರ್ತವ್ಯಪಥವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಏಳು ಗಂಟೆಗೆ ಉದ್ಘಾಟಿಸಿದರು. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ರಸ್ತೆಯನ್ನು ಈ ಹಿಂದೆ ರಾಜಪಥ ಎಂದು ಕರೆಯಲಾಗುತ್ತಿತ್ತು.
ರಾಜಪಥದ ಹೆಸರು ಬದಲಾವಣೆಯು ದೇಶಕ್ಕೆ ಹೊಸ ಚೈತನ್ಯ ಮತ್ತು ಸ್ಫೂರ್ತಿ ನೀಡಿದೆ ಎಂದು ಮೋದಿ ಅವರು ಉದ್ಘಾಟನೆಯ ಬಳಿಕ ಹೇಳಿದರು. ಕಿಂಗ್ಸ್‌ವೇ ಅಥವಾ ರಾಜಪಥ ಎಂಬ ಹೆಸರು ಗುಲಾಮಗಿರಿಯ ಸಂಕೇತ. ಈಗ ಅದು ಇತಿಹಾಸಕ್ಕೆ ಸಂದು ಹೋಗಿದೆ ಎಂದು ಹೇಳಿದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಮೋದಿ ಅವರು ಅನಾವರಣಗೊಳಿಸಿದರು. ಬೋಸ್ ಅವರು ತೋರಿದ್ದ ಹಾದಿಯಲ್ಲಿ ಭಾರತವು ಮುನ್ನಡೆದಿದ್ದರೆ, ದೇಶವು ಹೊಸ ಎತ್ತರಕ್ಕೆ ಏರುತ್ತಿತ್ತು. ಆದರೆ, ಅವರು ತೋರಿದ ದಾರಿಯನ್ನು ಮರೆತಿದ್ದೇವೆ ಎಂಬುದು ಬೇಸರದ ವಿಚಾರ ಎಂದು ಪ್ರಧಾನಿ ಹೇಳಿದರು.ಬೋಸ್ ಅವರು ಅಖಂಡ ಭಾರತದ ಮೊದಲ ಪ್ರಧಾನಿ ಎಂದು ಮೋದಿ ಬಣ್ಣಿಸಿದ್ದಾರೆ. ಅವರು 1947ಕ್ಕೆ ಮೊದಲೇ ಅಂಡಮಾನ್ ಅನ್ನು ಬ್ರಿಟಿಷರ ಹಿಡಿತದಿಂದ ಬಿಡಿಸಿದ್ದರು. ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು ಎಂದರು.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ಈ ಪಥವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ 15.5 ಕಿ.ಮೀ. ಉದ್ದದ ಪಾದಚಾರಿ ಹಾದಿ ನಿರ್ಮಿಸಲಾಗಿದೆ. ಕರ್ತವ್ಯಪಥವನ್ನು ಪಾದಚಾರಿಸ್ನೇಹಿಯನ್ನಾಗಿ ರೂಪಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ. ಪಾದಚಾರಿ ಮಾರ್ಗಕ್ಕೆ ಕೆಂಪು ಶಿಲೆ ಹಾಸಲಾಗಿದೆ, ನಾಲ್ಕು ಅಂಡರ್
ಪಾಸ್‌ಗಳನ್ನು ನಿರ್ಮಿಸಲಾಗಿದೆ.
ಸೆಂಟ್ರಲ್ ವಿಸ್ತಾ ಪುನರ್ ಅಭಿವೃದ್ಧಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹೊಸ ಸಂಸತ್ ಭವನ, ಪ್ರಧಾನಿ ಕಚೇರಿ ಮತ್ತು ನಿವಾಸ, ಉಪರಾಷ್ಟ್ರಪತಿ ನಿವಾಸ ಮುಂತಾದ ಕಟ್ಟಡಗಳನ್ನು ಇದರ ಭಾಗವಾಗಿ ನಿರ್ಮಿಸಲಾಗುತ್ತಿದೆ. ಈ ಪುನರ್ ಅಭಿವೃದ್ಧಿಯ ಭಾಗವಾಗಿ ಕರ್ತವ್ಯಪಥವನ್ನೂ ನವೀಕರಿಸಲಾಗಿದೆ.
ಪ್ರತಿಮೆ ಕೆತ್ತಿದ ಮೈಸೂರಿನ ಶಿಲ್ಪಿ
ಬೋಸ್ ಅವರ ಕಪ್ಪುಶಿಲೆಯ ಪ್ರತಿಮೆಯನ್ನು ತೆಲಂಗಾಣದ ಕಮ್ಮಮ್‌ನಲ್ಲಿ ಕೆತ್ತಲಾಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಮತ್ತು ಇತರರು ಈ ಪ್ರತಿಮೆಯನ್ನು ಕೆತ್ತಿದ್ದಾರೆ. ಕೇದಾರನಾಥ ದೇವಾಲಯದಲ್ಲಿರುವ ಶಂಕರಾಚಾರ್ಯರ ಪ್ರತಿಮೆಯನ್ನು ಅರುಣ್ ಅವರೇ ಕೆತ್ತಿದ್ದರು. ಈ ಪ್ರತಿಮೆಯು ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗಾಗಿ ಬೋಸ್ ಪ್ರತಿಮೆ ಕೆತ್ತಲು ಅರುಣ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.