ನವದೆಹಲಿ: ವಿಶ್ವದ ಅತ್ಯಂತ ಉದ್ದದ ನದಿ ವಿಹಾರದ ದೋಣಿ ‘ಎಂವಿ ಗಂಗಾ ವಿಲಾಸ್’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ. 13ರಂದು ಹಸಿರು ನಿಶಾನೆ ತೋರಲಿದ್ದಾರೆ.
ಅಲ್ಲದೇ, ವಾರಾಣಸಿಯಲ್ಲಿ ಗಂಗಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ‘ಟೆಂಟ್ ಸಿಟಿ’ಯನ್ನು ಸಹ ಅವರು ಉದ್ಘಾಟಿಸುವರು. ಈ ಕಾರ್ಯಕ್ರಮಗಳು ವರ್ಚುವಲ್ ವಿಧಾನದ ಮೂಲಕ ನಡೆಯಲಿವೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಪ್ರಕಟಣೆ ತಿಳಿಸಿದೆ.
ಇದೇ ವೇಳೆ, ₹1,000 ಕೋಟಿಗೂ ಅಧಿಕ ವೆಚ್ಚದ ವಿವಿಧ ಜಲಸಾರಿಗೆ ಯೋಜನೆಗಳಿಗೆ ಪ್ರಧಾನಿ ಅವರು ಶಿಲಾನ್ಯಾಸ ನೆರವೇರಿಸುವರು ಎಂದು ಪಿಎಂಒ ತಿಳಿಸಿದೆ.
ವಾರಾಣಸಿಯಿಂದ ತನ್ನ ಯಾತ್ರೆಯನ್ನು ಆರಂಭಿಸುವ ‘ಎಂವಿ ಗಂಗಾ ವಿಲಾಸ್’, ಬಾಂಗ್ಲಾದೇಶದ ಮೂಲಕ ಸಾಗಿ 51 ದಿನಗಳ ಬಳಿಕ ಅಸ್ಸಾಂನ ದಿಬ್ರೂಗಢ ತಲುಪಲಿದೆ.
ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಢಾಕಾ ಮೂಲಕ ಸಾಗಲಿದೆ. ಮಾರ್ಗ ಮಧ್ಯೆ, ಪಾರಂಪರಿಕ ಸ್ಥಳಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಹಾಗೂ ಪ್ರಮುಖ ನಗರಗಳು ಸೇರಿದಂತೆ ಒಟ್ಟು 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. ಈ ಯಾತ್ರೆಯು ಪ್ರವಾಸಿಗರಿಗೆ ಭಾರತ ಹಾಗೂ ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಅಧ್ಯಾತ್ಮ ಕುರಿತು ಮಾಹಿತಿ ಒದಗಿಸಲಿದೆ ಎಂದೂ ಪಿಎಂಒ ಪ್ರಕಟಣೆ ತಿಳಿಸಿದೆ.
ಮೂರು ಅಂತಸ್ತುಗಳ ಈ ಐಷಾರಾಮಿ ದೋಣಿಯ ಮೊದಲ ಯಾತ್ರೆಯಲ್ಲಿ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಪ್ರಯಾಣಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.