ADVERTISEMENT

ವಿಶ್ವ ಪಾರಂಪರಿಕ ಸಮಿತಿಯ 46ನೇ ಸಭೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ ​

ಪಿಟಿಐ
Published 21 ಜುಲೈ 2024, 2:48 IST
Last Updated 21 ಜುಲೈ 2024, 2:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ನವದೆಹಲಿಯಲ್ಲಿ ಜುಲೈ 21 ರಿಂದ 31ರ ವರೆಗೆ ನಡೆಯಲಿರುವ ವಿಶ್ವ ಪಾರಂಪರಿಕ ಸಮಿತಿಯ 46ನೇ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಉದ್ಘಾಟಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಪಾರಂಪರಿಕ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ. ಭಾರತ ಮಂಟಪಂನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಝೌಲೆ ಕೂಡ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಪ್ರಧಾನಿ ಮೋದಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ 150 ದೇಶಗಳಿಂದ 2,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ADVERTISEMENT

'ಪರಂಪರೆಯನ್ನು ಸಂರಕ್ಷಿಸುವ ಮಾರ್ಗಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಈ ಕಾರ್ಯಕ್ರಮವು ಪ್ರಮುಖ ವೇದಿಕೆ' ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಭಾರತವು ನವದೆಹಲಿಯಲ್ಲಿ ವಿಶ್ವ ಪಾರಂಪರಿಕ ಸಮಿತಿಯ ಸಭೆಯನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ. ನಮ್ಮ ರಾಷ್ಟ್ರವು ಈ ಸಭೆಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಭಾನುವಾರ ಸಂಜೆ 7 ಗಂಟೆಗೆ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಎದುರು ನೋಡುತ್ತಿದ್ದೇನೆ' ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ವಿಶ್ವಪಾರಂಪರಿಕ ಸಮಿತಿ ವರ್ಷದಲ್ಲಿ ಒಮ್ಮೆ ಸಭೆ ಸೇರುತ್ತದೆ. ವಿಶ್ವಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತಾದ ಚರ್ಚೆ ಮತ್ತು ಪಾರಂಪರಿಕ ತಾಣಗಳ ಪಟ್ಟಿಯನ್ನು ಸಭೆಯಲ್ಲಿ ನಿಗದಿ ಮಾಡಲಾಗುತ್ತದೆ. 11 ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ವಿಶ್ವಪಾರಂಪರಿಕ ಪಟ್ಟಿಗೆ ಸೇರಲಿರುವ ಹೊಸ 124 ತಾಣಗಳು, ಪ್ರಸ್ತುತ ಇರುವ ಪಾರಂಪರಿಕ ಆಸ್ತಿ, ಅಂತರರಾಷ್ಟ್ರೀಯ ನೆರವು, ವಿಶ್ವ ಪರಾಂಪರಿಕ ನಿಧಿಯ ಸದ್ಬಳಕೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ' ಎಂದು ಪ್ರಧಾನಮಂತ್ರಿ ಕಾರ್ಯಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.