ನವದೆಹಲಿ: ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಲಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿ (PMO) ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. '2024 ಜುಲೈ 26 ರಂದು 25ನೇ ಕಾರ್ಗಿಲ್ ವಿಜಯ ದಿವಸ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಿಗ್ಗೆ 9:20ರ ಸುಮಾರಿಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ' ಎಂದು ತಿಳಿಸಿದೆ.
'ಜುಲೈ 26 ಪ್ರತಿಯೊಬ್ಬ ಭಾರತೀಯನಿಗೂ ಬಹಳ ವಿಶೇಷವಾದ ದಿನವಾಗಿದೆ. ಇಂದು ನಮ್ಮ ದೇಶವನ್ನು ರಕ್ಷಿಸುವ ಎಲ್ಲರಿಗೂ ಗೌರವ ಸಲ್ಲಿಸುವ ದಿನ. ನಾನು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ಜೊತೆಗೆ ಶಿಂಕುನ್ ಲಾ ಸುರಂಗ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಾಗುವುದು' ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸುವ ಭಯೋತ್ಪಾದಕರ ಹಾಗೂ ಪಾಕಿಸ್ತಾನದ ಸೇನೆಯ ಕುತಂತ್ರದ ವಿರುದ್ಧ ಭಾರತೀಯ ಸೇನೆ ಘೋಷಿಸಿದ 'ಆಪರೇಷನ್ ವಿಜಯ್’ ಯಶಸ್ಸು ಸಾಧಿಸಿದ ದಿನವಾದ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂದೇ ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಈಗ 25 ವರ್ಷ.
ಯುದ್ಧದಲ್ಲಿ ಮಡಿದ ವೀರ ಯೋಧರನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.