ADVERTISEMENT

ಅಂಬೇಡ್ಕರ್ ಅವರ ನಿಜವಾದ ಅನುಯಾಯಿ ಮೋದಿ: ರಾಮನಾಥ ಕೋವಿಂದ್ ಹೇಳಿಕೆ

ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿಕೆ

ಪಿಟಿಐ
Published 16 ಸೆಪ್ಟೆಂಬರ್ 2022, 15:29 IST
Last Updated 16 ಸೆಪ್ಟೆಂಬರ್ 2022, 15:29 IST
ನವದೆಹಲಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಅವರು ‘ಅಂಬೇಡ್ಕರ್ ಆ್ಯಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಪ್ಲಿಮೆಂಟೇಷನ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಅನುರಾಗ್ ಠಾಕೂರ್, ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಚಿತ್ರದಲ್ಲಿದ್ದಾರೆ –ಪಿಟಿಐ ಚಿತ್ರ 
ನವದೆಹಲಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಅವರು ‘ಅಂಬೇಡ್ಕರ್ ಆ್ಯಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಪ್ಲಿಮೆಂಟೇಷನ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಅನುರಾಗ್ ಠಾಕೂರ್, ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಚಿತ್ರದಲ್ಲಿದ್ದಾರೆ –ಪಿಟಿಐ ಚಿತ್ರ    

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಅರ್. ಅಂಬೇಡ್ಕರ್ ಅವರ ನಿಜವಾದ ಅನುಯಾಯಿ. ಅವರು ಸಮಾಜ ಸುಧಾರಕರ ದೃಷ್ಟಿಕೋನವನ್ನು ವಾಸ್ತವಕ್ಕೆ ತರುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ’ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.

ಬ್ಲೂಕಾರ್ಟ್‌ ಡಿಜಿಟಲ್ ಫೌಂಡೇಷನ್ ಪ್ರಕಟಿಸಿರುವ‘ಅಂಬೇಡ್ಕರ್ ಆ್ಯಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಪ್ಲಿಮೆಂಟೇಷನ್’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆದ್ಯತೆ ನೀಡಿರುವಶಿಕ್ಷಣ, ಕಾರ್ಮಿಕರ ಹಿತರಕ್ಷಣೆ, ಮಹಿಳಾ ಸಬಲೀಕರಣ, ಸ್ವಾವಲಂಬಿ ದೇಶ ನಿರ್ಮಾಣ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು– ಇವೆಲ್ಲ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಹೊಂದಿರುವಂಥದ್ದು’ ಎಂದು ಅಭಿಪ್ರಾಯಪಟ್ಟರು.

‘ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ನಂತರದ ಸಂಕೀರ್ಣ ಬೆಳವಣಿಗೆಗಳ ಬಳಿಕ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಆದರೆ, ಅದು ಬಾಬಾ ಸಾಹೇಬರ ಆಶಯಗಳಿಗೆ ವಿರುದ್ಧವಾಗಿತ್ತು. 2019ರಲ್ಲಿ ಮೋದಿ ಸರ್ಕಾರದ ಪ್ರಯತ್ನಗಳ ಫಲವಾಗಿ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲಾಯಿತು. ಈ ಆದೇಶವು ಬಾಬಾ ಸಾಹೇಬರ ಆದರ್ಶವನ್ನು ಸಾಕಾರಗೊಳಿಸುವಂಥದ್ದಾಗಿತ್ತು. ಭಾರತದ ರಾಷ್ಟ್ರಪತಿಯಾಗಿ ಈ ಆದೇಶಕ್ಕೆ ಸಹಿ ಹಾಕುವ ಅದೃಷ್ಟ ನನ್ನದಾಗಿತ್ತು’ ಎಂದು ಅವರು ಹೇಳಿದರು.

ADVERTISEMENT

‘ಮೋದಿ ಅವರು ಅಂಬೇಡ್ಕರ್ ಅವರ ನಿಜವಾದ ಅನುಯಾಯಿ ಎಂಬುದಕ್ಕೆ ಇಂದು ಬಿಡುಗಡೆಯಾದ ಪುಸ್ತಕವೇ ಸಾಕ್ಷಿ. ಅಂಬೇಡ್ಕರ್ ಅವರು ಹಾಕಿಕೊಟ್ಟ ಆದರ್ಶಗಳಿಗೆ ಅನುಗುಣವಾಗಿ ಉತ್ತಮ ಆಡಳಿತ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ’ ಎಂದೂ ಕೋವಿಂದ್ ಹೇಳಿದರು.

ಇದಕ್ಕೂ ಮುನ್ನ ಇಲ್ಲಿನ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಮಯ’ ಕುರಿತ ವಸ್ತುಪ್ರದರ್ಶನವನ್ನು ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಉದ್ಘಾಟಿಸಿದರು.

ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್‌ನ ನಿರ್ದೇಶಕ ಹಿತೇಶ್ ಜೈನ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಎಲ್. ಮುರುಗನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.