ನವದೆಹಲಿ: ನೂತನ ಕಾಯ್ದೆಗಳು ಕೃಷಿ ಕ್ಷೇತ್ರದ ಸುಧಾರಣೆಗೆ ಹೇಗೆ ನೆರವಾಗುತ್ತವೆ ಎಂಬುದನ್ನು ವಿವರಿಸುವ ಪುಸ್ತಕಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ (ಇ–ಪುಸ್ತಕ) ಪ್ರಕಟಿಸಲಾಗಿದೆ. ಜನರು ಈ ಪುಸ್ತಕಗಳನ್ನು ಓದಿ, ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಕಳೆದ ಸೆಪ್ಟಂಬರ್‌ನಲ್ಲಿ ಜಾರಿಗೊಳಿಸಿದ ಸುಧಾರಿತ ಕೃಷಿ ಕಾಯ್ದೆಗಳಿಂದ ಲಾಭ ಪಡೆದ ಕೃಷಿಕರ ಯಶೋಗಾಥೆಗಳನ್ನು ಹಾಗೂ ನೂತನ ಕೃಷಿ ಕಾಯ್ದೆಗಳ ಮಹತ್ವವನ್ನು ವಿವರಿಸುವ ಇ–ಪುಸ್ತಕಗಳನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
‘ಈ ಪುಸ್ತಕಗಳಲ್ಲಿ ಗ್ರಾಫಿಕ್ಸ್‌ಗಳೊಂದಿಗೆ ವಿವರಣೆ ಇದೆ. ನಮೋ ಆ್ಯಪ್‌ನಲ್ಲಿಯೂ ಈ ಪುಸ್ತಕ ಲಭ್ಯ ಇದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದನ್ನು ಓದಿ, ವ್ಯಾಪಕವಾಗಿ ಹಂಚಿಕೊಳ್ಳಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಿಂದಿ ಪುಸ್ತಕದ ಕೆಲವು ಪುಟಗಳ ಚಿತ್ರಗಳನ್ನು (ಸ್ಕ್ರೀನ್ ಶಾಟ್ಸ್) ಸಹ ಹಂಚಿಕೊಂಡಿದ್ದಾರೆ.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸಿವೆ. ಇದೇ ಸಂದರ್ಭದಲ್ಲಿ ರೈತರಿಗೆ ನೂತನ ಕಾಯ್ದೆ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.