ನವದೆಹಲಿ: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳ ಈಗ ಸಾಂಕೇತಿಕವಾಗಿ ನಡೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
‘ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಜತೆ ದೂರವಾಣಿ ಮೂಲಕ ಕುಂಭ ಮೇಳದ ಕುರಿತು ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಹಲವು ಸಂತರು ಸೋಂಕಿಗೆ ಒಳಗಾಗಿದ್ದಾರೆ. ಸ್ಥಳೀಯ ಆಡಳಿತದೊಂದಿಗೆ ಸಂತರು ಸಹಕರಿಸಿರುವುದು ಶ್ಲಾಘನೀಯ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಎರಡು ಶಾಹಿ ಸ್ನಾನಗಳು (ಪವಿತ್ರ ಸ್ನಾನ) ನಡೆದಿವೆ. ಹೀಗಾಗಿ, ಈಗ ಕುಂಭವು ಸಾಂಕೇತಿಕಿಕವಾಗಿ ನಡೆಯಲಿ. ಇದರಿಂದ, ಪ್ರಸ್ತುತ ಎದುರಾಗಿರುವ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದ್ದಾರೆ.
ಮೋದಿ ಅವರು ಕರೆಯ ಬಳಿಕ ಪ್ರತಿಕ್ರಿಯಿಸಿರುವ ಅವಧೇಶಾನಂದ ಅವರು, ಕೋವಿಡ್–19 ಪರಿಸ್ಥಿತಿಯಿಂದ ಕುಂಭ ಮೇಳಕ್ಕೆ ಯಾರೂ ಬರಬಾರದು ಎಂದು ಕೋರಿದ್ದಾರೆ.
ತಮ್ಮ ಜೀವ ಮತ್ತು ಇತರರ ಜೀವ ಉಳಿಸುವುದೇ ಪವಿತ್ರ ಕಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.