ADVERTISEMENT

ಗಡಿಯಿಂದ ಚೀನಾಕ್ಕೆ ಸಂದೇಶ: ವಿಸ್ತರಣಾವಾದಕ್ಕೆ ತಿರುಗೇಟು

ಲೇಹ್‌ನ ನಿಮುಗೆ ಮೋದಿ ಭೇಟಿ *ಯೋಧರಿಗೆ ಮೆಚ್ಚುಗೆ

ಪಿಟಿಐ
Published 3 ಜುಲೈ 2020, 20:38 IST
Last Updated 3 ಜುಲೈ 2020, 20:38 IST
ಹುತಾತ್ಮ ಯೋಧರ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಹುತಾತ್ಮ ಯೋಧರ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ   

ಲೇಹ್‌: ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್‌ ಸಮೀಪದ ನಿಮು ಎಂಬಲ್ಲಿಗೆ ಶುಕ್ರವಾರ ಬೆಳಗ್ಗೆ ಅಚ್ಚರಿಯ ಭೇಟಿ ನೀಡಿದರು. ಇದು ಭಾರತ–ಚೀನಾ ಗಡಿ ಹತ್ತಿರದ ಪ್ರದೇಶ. ಅಲ್ಲಿ, ಯೋಧರ ಜತೆಗೆ ಅವರು ಸಂವಾದ ನಡೆಸಿದರು.

ಜೂನ್‌ 15ರಂದು ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈಗ, ಲೇಹ್‌ಗೆ ಭೇಟಿ ನೀಡುವ ಮೂಲಕ ಪ್ರಧಾನಿಯು ಚೀನಾ ದೇಶಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹುತಾತ್ಮರಾದ 20 ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ ಅವರು, ಯೋಧರ ಕೆಚ್ಚೆದೆಯ ಹೋರಾಟವು ಭಾರತದ ಶಕ್ತಿಯ ಬಗ್ಗೆ ಇಡೀ ಜಗತ್ತಿಗೆ ಸಂದೇಶ ನೀಡಿದೆ ಎಂದು ಹೇಳಿದರು.

ADVERTISEMENT

ಭೂಸೇನೆ, ವಾಯುಪಡೆ ಮತ್ತು ಐಟಿಬಿಪಿಯ (ಇಂಡೊ–ಟಿಬೆಟ್‌ ಗಡಿ ಪೊಲೀಸ್‌) ಸಿಬ್ಬಂದಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಸ್ತರಣಾವಾದದ ಯುಗವು ಮುಗಿದಿದೆ. ಇಡೀ ಜಗತ್ತು ಇಂತಹ ಪ್ರವೃತ್ತಿಯ ವಿರುದ್ಧ ಇದೆ. ಶಾಂತಿಗೆ ಮುಂದಾಗುವ ಅಥವಾ ಶಾಂತಿ ಸ್ಥಾಪಿಸುವ ಶಕ್ತಿಯು ದುರ್ಬಲರಿಗೆ ಇರುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಈಗಿನದ್ದು ಅಭಿವೃದ್ಧಿಯ ಯುಗ. ಅಭಿವೃದ್ಧಿಯೇ ಭವಿಷ್ಯದ ನೆಲೆಗಟ್ಟು. ವಿಸ್ತರಣೆ ಮಾಡಿಯೇ ತೀರುತ್ತೇವೆ ಎಂದು ಯಾರಾದರೂ ಪಟ್ಟು ಹಿಡಿದರೆ ಅದು ಜಾಗತಿಕ ಶಾಂತಿಗೆ ಅಪಾಯಕಾರಿ. ಇಂತಹ ಶಕ್ತಿಗಳನ್ನು ನಿರ್ಮೂಲನೆ ಮಾಡಿದ್ದಕ್ಕೆ ಅಥವಾ ಈ ಶಕ್ತಿಗಳೇ ಹಿಂದಕ್ಕೆ ನಡೆದದ್ದಕ್ಕೆ ಇತಿಹಾಸವು ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌, ಭೂಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರು ಮೋದಿ ಜತೆಗೆ ಇದ್ದರು. ಶುಕ್ರವಾರ ಬೆಳಗ್ಗೆ ಲೇಹ್‌ಗೆ ಬಂದ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ನಿಮು ತಲುಪಿದರು. ಇದು 11 ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶ. 14 ಕೋರ್‌ನ ಕಮಾಂಡರ್‌ ಹರಿಂದರ್‌ ಸಿಂಗ್‌ ಅವರು ಮೋದಿ ಅವರಿಗೆ ಎಲ್‌ಎಸಿಯ (ವಾಸ್ತವ ನಿಯಂತ್ರಣ ರೇಖೆ) ಸ್ಥಿತಿ ಬಗ್ಗೆ ಮಾಹಿತಿ ನೀಡಿದರು.

ಲೇಹ್‌, ಲಡಾಖ್‌, ಕಾರ್ಗಿಲ್‌ ಅಥವಾ ಸಿಯಾಚಿನ್‌ ನೀರ್ಗಲ್ಲು ಪ್ರದೇಶವಾಗಿರಲಿ, ಪರ್ವತ ಪ್ರದೇಶವಾಗಿರಲಿ, ಮಂಜುಗಡ್ಡೆಯಂತೆ
ತಂಪು ನೀರು ಹರಿಯುವ ನದಿಯಾಗಿರಲಿ, ಇವೆಲ್ಲವೂ ಭಾರತದ ಸಶಸ್ತ್ರ ಪಡೆಗಳ ಧೈರ್ಯಕ್ಕೆ ಸಾಕ್ಷಿ ಹೇಳುತ್ತವೆ. ಶತ್ರುಗಳು ನಮ್ಮ ಪಡೆಯ ಕೆಚ್ಚು ಮತ್ತು ಕಸುವನ್ನು ಕಂಡಿದ್ದಾರೆ ಎಂದು ಪ್ರಧಾನಿ ಹೇಳಿದರು.

‘ನೀವು ದೇಶವನ್ನು ಪ್ರಬಲವಾಗಿ ಮತ್ತು ಸುರಕ್ಷಿತವಾಗಿ ಇರಿಸುವಿರಿ ಎಂಬ ನಂಬಿಕೆ ಪ್ರತಿ ಭಾರತೀಯನಲ್ಲಿಯೂ ಇದೆ. ನಿಮ್ಮ ಧೈರ್ಯವು ನೀವಿರುವ ಈ ಸ್ಥಳಕ್ಕಿಂತಲೂ ಎತ್ತರವಾದುದು. ನಿಮ್ಮ ಬಾಹುಗಳು ಸುತ್ತಲಿನ ಪರ್ವತಗಳಿಗಿಂತಲೂ ಬಲವಾದವು. ನಿಮ್ಮ ಆತ್ಮವಿಶ್ವಾಸ, ಬದ್ಧತೆ ಮತ್ತು ನಂಬಿಕೆಗಳು ಈ ಶಿಖರಗಳಂತೆಯೇ ಅಚಲ’ ಎಂದು ಮೋದಿ ಸೈನಿಕರನ್ನು ಕೊಂಡಾಡಿದರು.

ಲೇಹ್‌ನ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ, ಗಾಲ್ವನ್‌ ಸಂಘರ್ಷದಲ್ಲಿ ಗಾಯಗೊಂಡು ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರ ಜತೆಗೆ ಮಾತನಾಡಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗಡಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆ ಭೇಟಿಯನ್ನು ರದ್ದುಪಡಿಸಿ, ಪ್ರಧಾನಿಯೇ ಭೇಟಿ ನೀಡಿದ್ದಾರೆ.

ಕೃಷ್ಣ ಮತ್ತು ಬುದ್ಧ
ಭಾರತವು ಕೊಳಲುಧಾರಿ ಕೃಷ್ಣನನ್ನು ಪೂಜಿಸುತ್ತದೆ. ಹಾಗೆಯೇ, ಸುದರ್ಶನ ಚಕ್ರಧಾರಿ ಕೃಷ್ಣನನ್ನೂ ಮಾದರಿ ಎಂದು ಪರಿಗಣಿಸುತ್ತದೆ. ಇಂತಹ ಸ್ಫೂರ್ತಿಯಿಂದಲೇ ಭಾರತವು ಪ್ರಬಲವಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದರು.ಬುದ್ಧನ ಬೋಧನೆಗಳಿಂದಲೂ ಭಾರತವು ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದರು.

***
ಸಂಕೀರ್ಣ ಮಾಡಬೇಡಿ: ಚೀನಾ
ಗಡಿ ಪರಿಸ್ಥಿತಿಯು ಇನ್ನಷ್ಟು ಸಂಕೀರ್ಣಗೊಳ್ಳುವಂತೆ ಎರಡೂ ಕಡೆಯ ಯಾರೂ ನಡೆದುಕೊಳ್ಳಬಾರದು ಎಂದು ಮೋದಿ ಅವರ ಲೇಹ್‌ ಭೇಟಿಗೆ ಚೀನಾ ಪ್ರತಿಕ್ರಿಯೆ ನೀಡಿದೆ.

‘ಭಾರತ ಮತ್ತು ಚೀನಾವು ಸೇನೆ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಯಲ್ಲಿ ತೊಡಗಿವೆ. ಇಂತಹ ಸಂದರ್ಭದಲ್ಲಿ ಗಡಿ ಸನ್ನಿವೇಶವನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌ ಹೇಳಿದ್ದಾರೆ.

ಚೀನಾವನ್ನು ವಿಸ್ತರಣಾವಾದಿ ಎಂದು ಕರೆಯುವುದು ಆಧಾರರಹಿತ. ನೆರೆಯ 14 ದೇಶಗಳ ಪೈಕಿ 12ರ ಜತೆಗಿನ ಗಡಿಯನ್ನು ಶಾಂತಿಯುತವಾಗಿ ಗುರುತಿಸಿಕೊಳ್ಳಲಾಗಿದೆ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರಿ ಜಿ ರೋಂಗ್‌ ಟ್ವೀಟ್‌ ಮಾಡಿದ್ದಾರೆ.

*
ಪ್ರಧಾನಿಯು ಲಡಾಖ್‌ಗೆ ಹೋಗಿ ಸೈನಿಕರ ಜತೆ ಮಾತನಾಡಿದ್ದರಿಂದ ಸೈನಿಕರಉತ್ಸಾಹ ಹೆಚ್ಚಾಗಿದೆ. ಇದರಿಂದ ಸೇನೆಯ ಮನೋಬಲ ಖಂಡಿತ ಹೆಚ್ಚುತ್ತದೆ.
-ರಾಜನಾಥ್ ಸಿಂಗ್, ರಕ್ಷಣಾ ಸಚಿವ

*
ವೀರ ಶಸ್ತ್ರದ ಶಕ್ತಿಯಿಂದಲೇ ಮಾತೃಭೂಮಿಯನ್ನು ರಕ್ಷಿಸುತ್ತಾನೆ. ಪ್ರಧಾನಿಯು ನಮ್ಮ ಸೈನಿಕರ ಶಕ್ತಿ, ಸಂಕಲ್ಪವನ್ನು ಹೆಚ್ಚಿಸಿದ್ದಾರೆ -ಅಮಿತ್ ಶಾ, ಕೇಂದ್ರ ಗೃಹ ಸಚಿವ

*
ಚೀನಾ ನಮ್ಮ ನೆಲವನ್ನು ಕಬಳಿಸಿದೆ ಎಂದು ಲಡಾಖ್‌ ಜನರು ಹೇಳುತ್ತಿದ್ದಾರೆ. ಯಾರೂ ಕಬಳಿಸಿಲ್ಲ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಒಬ್ಬರು ಸುಳ್ಳು ಹೇಳುತ್ತಿರುವುದಂತೂ ನಿಜ.
-ರಾಹುಲ್‌ ಗಾಂಧಿ, ಕಾಂಗ್ರೆಸ್ ಸಂಸದ

**

ಚೀನಾದ ಹೆಸರು ಹೇಳಲು ಹಿಂಜರಿಕೆ ಏಕೆ? ನಮ್ಮ ನೆಲದೊಳಗೆ ವೈರಿ (ಚೀನಾ) ಬಂದು ಕುಳಿತಿದ್ದಾನೆ ಎಂಬುದನ್ನು ಲೇಹ್‌ನಲ್ಲಿ ನಡೆದ ಪ್ರಹಸನವು ಸಾಬೀತು ಮಾಡಿದೆ.
-ಅಸಾದುದ್ದೀನ್ ಒವೈಸಿ, ಮುಖ್ಯಸ್ಥ ಮತ್ತು ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.