ಬರ್ಮೊ (ಜಾರ್ಖಂಡ್): ದೇಶದ ಆತ್ಮವಾಗಿರುವ ಸಂವಿಧಾನವನ್ನು ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಬರ್ಮೊದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರು ಬಡವರ ಕಲ್ಯಾಣಕ್ಕಾಗಿ ಅಲ್ಲ, ಕೋಟ್ಯಧಿಪತಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ. ಸಂವಿಧಾನವು ದೇಶದ ಆತ್ಮವಾಗಿದೆ. ನನ್ನ ಕೈಯಲ್ಲಿರುವ ಕೆಂಪು ಬಣ್ಣದ ಪುಸ್ತಕದ ಒಳಭಾಗ ಖಾಲಿಯಾಗಿದೆ ಎಂದು ಮೋದಿ ಹೇಳುತ್ತಾರೆ. ನೋಡಿ, ಇದು ಭಾರತದ ಆತ್ಮ ಮತ್ತು ಜ್ಞಾನವನ್ನು ಹೊಂದಿದೆ. ಪುಸ್ತಕದ ಬಣ್ಣ ಮುಖ್ಯವಲ್ಲ, ಅದರೊಳಗಿರುವ ವಿಷಯ ಮುಖ್ಯವಾಗಿದೆ’ ಎಂದು ರಾಹುಲ್ ಪುಸ್ತಕವನ್ನು ಪ್ರದರ್ಶಿಸಿದ್ದಾರೆ.
ರಾಹುಲ್ ಗಾಂಧಿ ಚುನಾವಣಾ ಸಮಾವೇಶಗಳಲ್ಲಿ ಪ್ರದರ್ಶಿಸುವ ಕೆಂಪು ಬಣ್ಣದ ಪುಸಕ್ತದ ಕುರಿತು ಬಿಜೆಪಿ ಆಕ್ಷೇಪವನ್ನು ಎತ್ತಿತ್ತು. ಕೆಂಪು ಬಣ್ಣ ಪುಸ್ತಕದ ಒಳಭಾಗ ಖಾಲಿಯಾಗಿದೆ ಎಂದು ಇತ್ತೀಚೆಗೆ ಬಿಜೆಪಿ ಆರೋಪಿಸಿತ್ತು.
‘ಸಂವಿಧಾನವನ್ನು ನಾಶಗೊಳಿಸಲು ಪ್ರಧಾನಿ ಮೋದಿ ಅವರು ಬಯಸುತ್ತಾರೆ. ಆದರೆ, ಯಾವುದೇ ಶಕ್ತಿ ಸಂವಿಧಾನವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ದೇಶದ ಸಂಪತ್ತನ್ನು ಕೇವಲ 25 ಬಂಡವಾಳಶಾಹಿಗಳ ಕೈಗೆ ನೀಡಿದ್ದಾರೆ. ಕೈಗಾರಿಕೋದ್ಯಮಿಗಳ ಸುಮಾರು ₹16 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ಆದರೆ, ಬಡವರು, ರೈತರು ಮತ್ತು ದಲಿತರಿಗಾಗಿ ಏನನ್ನೂ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಮೂಲಕ ದೇಶದ ಯುವಜನತೆಯನ್ನು ಪ್ರಧಾನಿ ಮೋದಿ ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.