ನವದೆಹಲಿ : ಪ್ರತಿ ಉದ್ದೇಶಿತ ಫಲಾನುಭವಿಗೂ ಆರೋಗ್ಯ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಸೆ. 13ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಹೇಳಿದ್ದಾರೆ.
‘ಸೆ. 13ರಂದೇ ‘ಆಯುಷ್ಮಾನ್ ಭವ’ಕ್ಕೆ ಚಾಲನೆ ನೀಡಲಾಗಿದ್ದರೂ ಅದನ್ನು ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ನಡೆಯಲಿರುವ ‘ಸೇವಾ ಪಾಕ್ಷಿಕ’ದ ಮೊದಲ ದಿನ ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಶಿಬಿರಗಳನ್ನು ನಡೆಸಿ ಸುಮಾರು 60 ಸಾವಿರ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.
‘ಅ. 2ರಂದು ಈ ಪಾಕ್ಷಿಕ ಮುಕ್ತಾಯವಾಗಲಿದ್ದು, ಅಂದಿನವರೆಗೆ ಆರೋಗ್ಯ ಜಾಗೃತಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ‘ಅಂತ್ಯೋದಯ’ವನ್ನು ಗುರಿಯಾಗಿಸಿಕೊಂಡು ಪ್ರತಿ ಗ್ರಾಮದಲ್ಲಿನ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ’ ಎಂದರು.
ಆಯುಷ್ಮಾನ್ ಆಪ್ಕೆ ದ್ವಾರ 3.0ರ ಅಡಿಯಲ್ಲಿ ಬರುವ ‘ಆಯುಷ್ಮಾನ್ ಭವ’ ಅಭಿಯಾನನವು ಬಾಕಿ ಉಳಿದಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳ ರಚನೆ ಮತ್ತು ವಿತರಣೆಯ ಗುರಿಯನ್ನು ಹೊಂದಿದೆ. ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಪ್ರತಿವಾರವೂ ನಡೆಯುವ ಆರೋಗ್ಯ ಮೇಳಗಳ ಭಾಗವಾಗಿ ಆಯುಷ್ಮಾನ್ ಮೇಳವನ್ನು ನಡೆಸಲಾಗುತ್ತದೆ. ಈ ಮೇಳಗಳು ಪ್ರತಿ ಗ್ರಾಮ, ವಾರ್ಡ್‌ಮಟ್ಟದ ಸಭೆಗಳಲ್ಲಿ ಆರೋಗ್ಯ ಸೇವೆ ಮತ್ತು ಆರೋಗ್ಯ ರಕ್ಷಣೆಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ.
ಈ ಮೇಲಿನ ಎಲ್ಲಾ ಉಪಕ್ರಮಗಳ ಯಶಸ್ವಿ ಅನುಷ್ಠಾನದೊಂದಿಗೆ, ಅಭಿಯಾನವು ಅಂತಿಮವಾಗಿ ಗ್ರಾಮ ಅಥವಾ ನಗರ ಪಂಚಾಯತ್ ಅನ್ನು ‘ಆಯುಷ್ಮಾನ್ ಗ್ರಾಮ ಪಂಚಾಯತ್’ ಅಥವಾ ‘ಆಯುಷ್ಮಾನ್ ವಾರ್ಡ್’ ಸ್ಥಾನಮಾನವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಮಾಂಡವಿಯಾ ಹೇಳಿದ್ದಾರೆ.
‘ಸೇವಾ ಪಖ್ವಾಡ’ದ ಸಮಯದಲ್ಲಿ ಆನ್‌ಲೈನ್ ಅಂಗದಾನ ಪ್ರತಿಜ್ಞೆ ನೋಂದಣಿಯನ್ನು ಪ್ರಾರಂಭಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಬಿಜೆಪಿಯು ಪ್ರಧಾನಿ ಮೋದಿ ಅವರ ಜನ್ಮದಿನದಿಂದ ಅಂದರೆ ಸೆ. 17ರಿಂದ ಅ. 2ರವರೆಗೆ ‘ಸೇವಾ ಪಾಕ್ಷಿಕ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.