ADVERTISEMENT

ಮೋದಿ, ಶಾಗೆ ಆತಂಕ | ಸೋಲಿನ ಭೀತಿಯಿಂದ ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ: ಖರ್ಗೆ

 

​ಪ್ರಜಾವಾಣಿ ವಾರ್ತೆ
Published 10 ಮೇ 2024, 13:10 IST
Last Updated 10 ಮೇ 2024, 13:10 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಹೈದರಾಬಾದ್: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿ ಅಮಿತ್ ಶಾ ‘ಆತಂಕ’ಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುವ ಬದಲು ಕಾಂಗ್ರೆಸ್ ನಾಯಕರನ್ನು ದೂಷಿಸುತ್ತಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್‌ ನಾಯಕರ ಹೇಳಿಕೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. 

‘ಅದಾನಿ ಮತ್ತು ಅಂಬಾನಿ ಅವರು ಕಾಂಗ್ರೆಸ್‌ಗೆ ಟೆಂಪೊ ತುಂಬಾ ಹಣ ನೀಡುತ್ತಿದ್ದಾಗ ಮೋದಿ ಅವರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಸೋಲು ಎದುರಾಗುವ ಆತಂಕದಲ್ಲಿ ಇದೀಗ ತಮ್ಮ ಪ್ರಣಾಳಿಕೆಯನ್ನು ಬಿಟ್ಟು, ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ADVERTISEMENT

‘ಟೆಂಪೊದಲ್ಲಿ ಹಣ ಕೊಂಡೊಯ್ಯುತ್ತಿದ್ದಾಗ ನೀವು ಸುಮ್ಮನೆ ನೋಡುತ್ತಾ ನಿಂತಿದ್ದೀರಾ? ಹಣ ಯಾರ ಮನೆಗೆ ಹೋಗಿದೆ ಎಂಬುದನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಿ. ನಿಮ್ಮ ಸಿಬಿಐ, ಐ.ಟಿ, ಇ.ಡಿ ಎಲ್ಲಿವೆ? ಇಂತಹ ಬಾಲಿಶ ಮಾತುಗಳು ಪ್ರಧಾನಿ ಹುದ್ದೆಯಲ್ಲಿರುವವರಿಗೆ ಸರಿ ಹೊಂದುವುದಿಲ್ಲ’ ಎಂದು ಹೇಳಿದರು.

ಪ್ರಧಾನಿ ‘ಸುಳ್ಳುಗಳ ಸರದಾರ’ ಎಂಬುದನ್ನು ಪುನರುಚ್ಚರಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ಸಮಾಜದಲ್ಲಿ ಒಡಕು ಉಂಟುಮಾಡಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ತೆಲಂಗಾಣದ ಕಾಂಗ್ರೆಸ್‌ ಸರ್ಕಾರವು ಆರು ‘ಗ್ಯಾರಂಟಿ’ಗಳಲ್ಲಿ ಐದನ್ನು ಜಾರಿಗೆ ತಂದಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಇನ್ನುಳಿದ ಒಂದು ಗ್ಯಾರಂಟಿ ಜಾರಿ ವಿಳಂಬವಾಗಿದೆ ಎಂದು ತಿಳಿಸಿದರು. 

ಉತ್ತರ ಪ್ರದೇಶದಲ್ಲಿ ಇಂಡಿಯಾ ಕೂಟಕ್ಕೆ 50 ಸ್ಥಾನ:

ರಾಹುಲ್ ಕನೌಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪರ ಅಲೆ ಬೀಸುತ್ತಿದ್ದು ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸ್ಪರ್ಧಿಸುತ್ತಿರುವ ಕನೌಜ್‌ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು ‘ಮೋದಿ ಅವರು ಭಾರತದ ಪ್ರಧಾನಿಯಾಗುವುದು ಮುಗಿದ ಅಧ್ಯಾಯ. ನಾನು ಹೇಳುವುದನ್ನು ನೀವು ಬರೆದಿಟ್ಟುಕೊಳ್ಳಿ’ ಎಂದು ಹೇಳಿದರು. ‘ಮೋದಿ ಅವರು ಕಳೆದ 10 ವರ್ಷಗಳಲ್ಲಿ ಅಂಬಾನಿ ಮತ್ತು ಅದಾನಿ ಅವರ ಹೆಸರು ಪ್ರಸ್ತಾಪಿಸದೇ ಇರುವುದನ್ನು ನೀವು ಗಮನಿಸಿದ್ದೀರಿ. ಆದರೆ ಈಗ ಅವರ ಹೆಸರು ಹೇಳುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ತನ್ನನ್ನು ಸುತ್ತುವರಿದಿದ್ದು ಅಂಬಾನಿ–ಅದಾನಿ ನನ್ನನ್ನು ಕಾಪಾಡಿ ಎಂದು ಅಂಗಾಲಾಚುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. ಬಳಿಕ ಕಾನ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು ‘ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಕೂಟ 50ರಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಅಖಿಲೇಶ್‌ ಯಾದವ್‌ ಮತ್ತು ಎಎಪಿ ನಾಯಕ ಸಂಜಯ್‌ ಸಿಂಗ್‌ ಅವರೂ ಪ್ರಚಾರ ಸಭೆಯಲ್ಲಿ ಮತನಾಡಿದರು. ಕನೌಜ್‌ ಕ್ಷೇತ್ರದ ಮತದಾನ ಮೇ 13ರಂದು ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.