ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ, ನೆರೆ ರಾಷ್ಟ್ರಗಳ ಮತ್ತು ವಿಶ್ವದ ಮೇಲೆ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಚರ್ಚೆ ನಡೆಸಿದ್ದಾರೆ. ಶಾಂತಿ ಮತ್ತು ಭದ್ರತೆಗೆ ಒತ್ತು ನೀಡುವ ಬಗ್ಗೆ ಉಭಯ ನಾಯಕರು ಮಾತುಕತೆ ವೇಳೆ ಹೆಚ್ಚಿನ ಒತ್ತು ನೀಡಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಜನರನ್ನು ಕರೆಸಿಕೊಳ್ಳುವುದು ಸದ್ಯದ ತುರ್ತು ಆದ್ಯತೆಯಾಗಿದೆ ಎಂದು ಇಬ್ಬರೂ ನಾಯಕರು ಹೇಳಿರುವುದಾಗಿ ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ದ್ವಿಪಕ್ಷೀಯ ವಿಚಾರಗಳು, ಕೋವಿಡ್ ಲಸಿಕೆ, ಅಭಿವೃದ್ಧಿ, ಹವಾಮಾನ ಹಾಗೂ ಇಂಧನ ವಿಚಾರಗಳಲ್ಲಿ ಸಹಕಾರ, ವಹಿವಾಟು ವೃದ್ಧಿಸುವುದು ಮತ್ತು ಆರ್ಥಿಕ ಬಾಂಧವ್ಯದ ಬಗ್ಗೆಯೂ ಮೋದಿ– ಮೆರ್ಕೆಲ್ ಮಾತುಕತೆ ನಡೆಸಿದ್ದಾರೆ.
‘ಜರ್ಮನಿಯ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಜತೆ ಮಾತನಾಡಿದೆ. ದ್ವಿಪಕ್ಷೀಯ ವಿಚಾರಗಳು, ಅಫ್ಗಾನಿಸ್ತಾನದ ಬೆಳವಣಿಗೆಗಳೂ ಸೇರಿದಂತೆ ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ. ಭಾರತ-ಜರ್ಮನಿ ವ್ಯೂಹಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಕುರಿತಾದ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.