ಲಖನೌ: ‘ಉತ್ತರ ಪ್ರದೇಶದಲ್ಲಿ ಹಿಂದೆ ಆಳ್ವಿಕೆ ನಡೆಸಿದ ಸರ್ಕಾರ ಕೇಂದ್ರದ ವಸತಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯುಂಟು ಮಾಡುವ ಮೂಲಕ, ರಾಜ್ಯದ ಬಡವರಿಗೆ ಮನೆ ನಿರ್ಮಿಸಿಕೊಡಲು ಆಸಕ್ತಿ ತೋರಲಿಲ್ಲ‘ ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ಪಿಎಂಎವೈ–ಯು ಯೋಜನೆಯ 75 ಸಾವಿರ ಫಲಾನುಭವಿಗಳಿಗೆ ವರ್ಚುವಲ್ ರೂಪದಲ್ಲಿ ಕೀಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ‘2017ಕ್ಕೂ ಹಿಂದೆ, ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಬಡವರಿಗೆ ಮನೆ ನಿರ್ಮಿಸಿಕೊಡಲು ₹18 ಸಾವಿರ ಕೋಟಿ ಮಂಜೂರು ಮಾಡಿತ್ತು. ಆದರೆ, ಆ ಸರ್ಕಾರ 18 ಮನೆಗಳನ್ನೂ ನಿರ್ಮಾಣ ಮಾಡಲಿಲ್ಲ‘ ಎಂದು ಆರೋಪಿಸಿದರು.
‘ಆದರೆ, ಈಗ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಇದೇ ಯೋಜನೆಯಡಿ ಉತ್ತರ ಪ್ರದೇಶದಲ್ಲಿ 9 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದೆ. 14 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ‘ ಎಂದು ಮೋದಿ ಹೇಳಿದರು.
‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ ಮೂರು ಕೋಟಿ ಬಡ ಕುಟುಂಬಗಳನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದೆ‘ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.