ADVERTISEMENT

‘ನಿರ್ದಿಷ್ಟ ದಾಳಿ: ಉಸ್ತುವಾರಿ ವಹಿಸಿದ್ದೆ’– ಪ್ರಧಾನಿ ಮೋದಿ

2016ರ ಕಾರ್ಯಾಚರಣೆಯ ನೆನಪು: ಕೆಚ್ಚಿನ ಬಗ್ಗೆ ಹೆಮ್ಮೆ ಎಂದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 7:06 IST
Last Updated 5 ನವೆಂಬರ್ 2021, 7:06 IST
ನೌಶೇರಾ ಸೇನಾನೆಲೆಯಲ್ಲಿ ಯೋಧರಿಗೆ ಸಿಹಿ ತಿನ್ನಿಸಿದ ಪ್ರಧಾನಿ ನರೇಂದ್ರ ಮೋದಿ  –ಪಿಟಿಐ ಚಿತ್ರ
ನೌಶೇರಾ ಸೇನಾನೆಲೆಯಲ್ಲಿ ಯೋಧರಿಗೆ ಸಿಹಿ ತಿನ್ನಿಸಿದ ಪ್ರಧಾನಿ ನರೇಂದ್ರ ಮೋದಿ  –ಪಿಟಿಐ ಚಿತ್ರ   

ಶ್ರೀನಗರ: ಕೊನೆಯ ಯೋಧ ಸುರಕ್ಷಿತವಾಗಿ ಹಿಂದಿರುಗುವವರೆಗೂ 2016ರಲ್ಲಿ ನಡೆದ ನಿರ್ದಿಷ್ಟ ದಾಳಿಯ ಉಸ್ತುವಾರಿಯನ್ನು ತಾವೇ ನೋಡಿಕೊಂಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

2016ರ ಸೆಪ್ಟೆಂಬರ್‌ 29ರಂದು ನಿಯಂತ್ರಣ ರೇಖೆಯ ಆಚೆಗೆ ನಡೆಸಿದ ನಿರ್ದಿಷ್ಟ ದಾಳಿಯುಭಾರತೀಯ ಸೇನೆಯ ಕೆಚ್ಚು ಮತ್ತು ಸಾಮರ್ಥ್ಯವನ್ನು ತೋರುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಈ ನಿರ್ದಿಷ್ಟ ದಾಳಿ ನಡೆದಿತ್ತು.

‘ನಿರ್ದಿಷ್ಟ ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬ ಯೋಧನೂ ಸುರಕ್ಷಿತವಾಗಿ ಹಿಂದಿರುಗಿದ್ದನ್ನು ನಾನು ಖಾತರಿಪಡಿಸಿಕೊಳ್ಳಬೇಕಿತ್ತು. ದಾಳಿ ನಡೆಸಿದ ಎಲ್ಲರೂ ಸುರಕ್ಷಿತವಾಗಿ ತಮ್ಮ ತಮ್ಮ ಘಟಕಗಳಿಗೆ ಹಿಂದಿರುಗುವ ಮೂಲಕ ನಮ್ಮ ಹೆಮ್ಮೆಗೆ ಕಾರಣರಾಗಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

‘ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆ. ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನಿಮಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಹೇಳಿದರು.

ಭಯೋತ್ಪಾದನೆಯನ್ನು ಹರಡುವ ಹಲವು ಯತ್ನಗಳು ನಿರ್ದಿಷ್ಟ ದಾಳಿಯ ಬಳಿಕ ನಡೆದಿವೆ. ಆದರೆ, ಈ ಎಲ್ಲ ಪ್ರಯತ್ನಗಳಿಗೂ ತಕ್ಕ ಉತ್ತರ ನೀಡಲಾಗಿದೆ. ಶಸ್ತ್ರಾಸ್ತ್ರಕ್ಕೆ ಭಾರತವು ವಿದೇಶವನ್ನು ಅವಲಂಬಿಸಿದ್ದ ದಿನಗಳಿದ್ದವು. ಶಸ್ತ್ರಾಸ್ತ್ರಗಳ ಬಿಡಿಭಾಗಗಳು ವಿದೇಶದಿಂದ ಬರುವುದಕ್ಕೆ ಯೋಧರು ಕಾಯಬೇಕಿತ್ತು. ಈ ಬಿಡಿಭಾಗಗಳು ತಲುಪುವುದಕ್ಕೆ ವರ್ಷಗಟ್ಟಲೆ ಕಾಯಬೇಕಿತ್ತು. ಆದರೆ, ಈಗ ರಕ್ಷಣಾ ಬಜೆಟ್‌ನ ಶೇ 65ರಷ್ಟು ಮೊತ್ತವನ್ನು ದೇಶದೊಳಗೇ ವೆಚ್ಚ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಬದಲಾಗುತ್ತಿರುವ ಜಗತ್ತು ಮತ್ತು ಯುದ್ಧ ವಿಧಾನಗಳಿಗೆ ಅನುಗುಣವಾಗಿ ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಮೋದಿ ಹೇಳಿದ್ದಾರೆ.

‘ಅರ್ಜುನ ಟ್ಯಾಂಕ್‌ ಮತ್ತು ತೇಜಸ್‌ ಯುದ್ಧ ವಿಮಾನಗಳು ಕೂಡ ಈಗ ದೇಶದಲ್ಲಿ ತಯಾರಾಗುತ್ತಿವೆ. 200ಕ್ಕೂ ಹೆಚ್ಚು ಬಿಡಿಭಾಗಗಳು ಮತ್ತು ಸಾಧನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಹೀಗೆ, ವಿದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿದ್ದೇವೆ’ ಎಂದು ಅವರು ಹೇಳಿದರು.

ದೇಶದ ಸುರಕ್ಷತೆಯ ವಿಚಾರದಲ್ಲಿ ಮಹಿಳೆಯರು ವಹಿಸುತ್ತಿರುವ ಪಾತ್ರವನ್ನು ಮೋದಿ ಶ್ಲಾಘಿಸಿದರು. ಮಹಿಳೆಯರ ಪಾತ್ರವು ಈಗ ಹೊಸ ಎತ್ತರಕ್ಕೆ ಏರಿದೆ ಎಂದರು. ‘ರಕ್ಷಣಾ ಪಡೆಗಳಲ್ಲಿ ನಮ್ಮ ಹೆಣ್ಣುಮಕ್ಕಳು ಹೊಸ ಎತ್ತರಕ್ಕೆ ಏರಿದ್ದಾರೆ. ದೇಶದ ರಕ್ಷಣೆಯಲ್ಲಿ ಅವರು ವಹಿಸುತ್ತಿರುವ ಪಾತ್ರವು ಎಣಿಕೆಗೆ ನಿಲುಕದ್ದು’ ಎಂದು ಮೋದಿ ಹೇಳಿದರು.

ಯೋಧರ ಜತೆ ದೀಪಾವಳಿ ಸಂಪ್ರದಾಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಯೋಧರ ಜೊತೆ ದೀಪಾವಳಿ ಆಚರಿಸಿದರು.

ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅವರು ದೀಪಾವಳಿಯನ್ನು ಗಡಿ ಪ್ರದೇಶಕ್ಕೆ ತೆರಳಿ ಸೈನಿಕರ ಜೊತೆ ಆಚರಿಸುವ ಸಂಪ್ರದಾಯ ಹಾಕಿಕೊಂಡಿದ್ದಾರೆ. ಈ ಬಾರಿಗಡಿ ಜಿಲ್ಲೆಯಾದ ರಜೌರಿಯ ನೌಶೇರಾ ವಲಯದಲ್ಲಿ ದೀಪಾವಳಿ ಆಚರಿಸಿದರು. 2014ರಲ್ಲಿ ಮೊದಲ ಬಾರಿ ಸಿಯಾಚಿನ್‌ ಪ್ರದೇಶದಲ್ಲಿ ದೀಪಾವಳಿ ಆಚರಿಸಿದ್ದರು.

ನೌಶೇರಾದ ಸೇನಾ ನೆಲೆಯಲ್ಲಿ ಅವರು ದೀಪಾವಳಿ ಆಚರಿಸಿದ ಫೋಟೊಗಳನ್ನು ಅಧಿಕೃತ ಮೂಲಗಳು ಹಂಚಿಕೊಂಡಿವೆ.ರಜೌರಿ ಜಿಲ್ಲೆಯಲ್ಲಿ ಮೋದಿ ಅವರು ದೀಪಾವಳಿ ಆಚರಿಸುತ್ತಿರುವುದು ಇದು ಎರಡನೇ ಬಾರಿ.

ಮೋದಿ ಅವರನ್ನು ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ವೈಮಾನಿಕ ವೀಕ್ಷಣೆಗೆ ಕರೆದುಕೊಂಡು ಹೋದರು. ಜಮ್ಮುವಿನ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಒದಗಿಸಲಾಗಿರುವ ಭದ್ರತೆ ಕುರಿತು ಮೋದಿ ಅವರಿಗೆ ವಿವರಣೆ ನೀಡಿದರು.

ಮೋದಿ ಅವರು ತಮ್ಮ ನಿವಾಸದಿಂದ ಹೊರಟಾಗ, ಸ್ಥಳದಲ್ಲಿ ಕನಿಷ್ಠ ಮಟ್ಟದ ಭದ್ರತೆ ಒದಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಛ್‌ ಮತ್ತು ರಜೌರಿ ಪ್ರದೇಶದ ಅರಣ್ಯ ವಲಯದಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆ 26ನೇ ದಿನಕ್ಕೆ ಕಾಲಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಸುದೀರ್ಘ ಕಾರ್ಯಾಚರಣೆ ಇದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.