ನವದೆಹಲಿ: ಪಾಕಿಸ್ತಾನದ ಮಾನವಹಿತದ ಹೋರಾಟಗಾರ್ತಿ ಬಿಲ್ಕಿಸ್ ಈದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಶನಿವಾರ ಟ್ವಿಟಿಸಿದ್ದಾರೆ.
'ಜೀವನ ಪರ್ಯಂತ ನಡೆಸಿದ ಮಾನವೀಯ ಕಾರ್ಯಗಳು ಜಗತ್ತಿನಾದ್ಯಂತ ಜನರನ್ನು ತಲುಪಿದೆ. ಭಾರತದಲ್ಲಿಯೂ ಅತೀವ ಪ್ರೀತಿಯಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ' ಎಂದು ಹಂಚಿಕೊಂಡಿದ್ದಾರೆ.
ಬಿಲ್ಕಿಸ್ ಬಾನೊ ಈದಿ (74) ಅವರು ಶುಕ್ರವಾರ ಕರಾಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಬಿಲ್ಕಿಸ್ ಅವರ ಪತಿ ಅಬ್ದುಲ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿ, ಅಬ್ದುಲ್ ಸತರ್ ಈದಿ ಫೌಂಡೇಶನ್ ಸ್ಥಾಪಿಸಿದರು. ಆ ಮೂಲಕ ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿ ಜನೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಅನಾಥ ಮಕ್ಕಳಿಗಾಗಿ ತೊಟ್ಟಿಲು ಕಟ್ಟಿದ ತಾಯಿ
ಬಡವರು, ಅನಾಥರು, ಮಕ್ಕಳು ಹಾಗೂ ಮನೆಯಿಲ್ಲದವರು,...ಹೀಗೆ ಸಮಾಜದಲ್ಲಿ ನೆರವು ಬೇಕಿರುವ ಎಲ್ಲ ವರ್ಗಕ್ಕೂ ಮುಂಚೂಣಿಯಲ್ಲಿ ನಿಂತು ಆಸರೆ ನೀಡಿದವರು ಬಿಲ್ಕಿಸ್. ಮಾನವ ಜನಾಂಗದ ಸೇವೆಯಲ್ಲಿ 60ಕ್ಕೂ ಹೆಚ್ಚು ವರ್ಷಗಳನ್ನು ಕಳೆದವರು. ಪಾಕಿಸ್ತಾನದಾದ್ಯಂತ ಬಿಲ್ಕಿಸ್ ಅವರ ಸಂಸ್ಥೆಗೆ ಸೇರಿದ 'ಈದಿ ಗೃಹಗಳು' ಹಾಗೂ ಕೇಂದ್ರಗಳಲ್ಲಿ ತೊಟ್ಟಿಲು ಇಡುವ ಕಾರ್ಯಕ್ರಮವನ್ನು ರೂಪಿಸಿದರು.
ಹೆತ್ತವರಿಗೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಆ ತೊಟ್ಟಿಲಲ್ಲಿ ಮಲಗಿಸಲು ಅವಕಾಶ ಕಲ್ಪಿಸಲಾಯಿತು. ಮಕ್ಕಳನ್ನು ಹೆತ್ತ ತಾಯಿ ಅಥವಾ ಮಗುವನ್ನು ಧಿಕ್ಕರಿಸಿರುವ ಕುಟುಂಬದವರು ಮಕ್ಕಳನ್ನು ಆ ತೊಟ್ಟಿಲುಗಳಲ್ಲಿ ಮಲಗಿಸಿ ಕಾಣೆಯಾಗುತ್ತಿದ್ದರು. ಅಂಥ ಮಕ್ಕಳನ್ನು ಬಿಲ್ಕಿಸ್ ಅವರ ಸಂಸ್ಥೆಯು ನೋಡಿಕೊಳ್ಳುತ್ತಿದೆ. ತೊಟ್ಟಿಲು ಇಟ್ಟು ಮಕ್ಕಳ ಜೀವ ಉಳಿಸುವ ಕಾರ್ಯಕ್ರಮವು ಬಿಲ್ಕಿಸ್ ಅವರಿಗೆ ಹೆಚ್ಚಿನ ಜನರ ಪ್ರೀತಿಯನ್ನು ನೀಡಿತು.
'ಪಾಕಿಸ್ತಾನದ ತಾಯಿ' ಎಂದೇ ಅವರನ್ನು ಗುರುತಿಸಲಾಯಿತು. ಮದರ್ ತೆರೇಸಾ ಮೆಮೋರಿಯಲ್ ಇಂಟರ್‌ನ್ಯಾಷನಲ್ ಅವಾರ್ಡ್, ರಾಮನ್ ಮ್ಯಾಗ್ಸೆಸ್ಸೆ, ಲೆನಿನ್ ಶಾಂತಿ ಪ್ರಶಸ್ತಿ ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಂದಿವೆ. ಕಳೆದ ವರ್ಷ ಅವರನ್ನು 'ದಶಕದ ವ್ಯಕ್ತಿ' ಎಂದು ಗೌರವಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.