ADVERTISEMENT

ಏಕತಾ ಪ್ರತಿಮೆಗೆ ರೈಲ್ವೆ ಸಂಪರ್ಕ: ಎಂಟು ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಏಜೆನ್ಸೀಸ್
Published 17 ಜನವರಿ 2021, 8:10 IST
Last Updated 17 ಜನವರಿ 2021, 8:10 IST
   

ಕೆವಾಡಿಯಾ: ಏಕತಾ ಪ್ರತಿಮೆ ಇರುವ ಗುಜರಾತ್‌ನ ಕೆವಾಡಿಯಾಗೆ ಸಂಪರ್ಕಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳಿಂದ ಹೊರಡುವ ರೈಲುಗಳು ಒಂದೇ ಗಮ್ಯಕ್ಕೆ ತಲುಪುವ ಯೋಜನೆಗೆ ಚಾಲನೆ ದೊರೆತಿರುವುದು ರೈಲ್ವೆ ಇತಿಹಾಸದಲ್ಲಿ ಇದೇ ಮೊದಲು’ ಎಂದು ಹೇಳಿದರು.

‘ಸ್ವಾತಂತ್ರ್ಯ ಪ್ರತಿಮೆ ಬಳಿಗೆ ತೆರಳುವ ಪ್ರವಾಸಿಗರಿಗಿಂತಲೂ ಹೆಚ್ಚು ಸಂದರ್ಶಕರು ಏಕತಾ ಪ್ರತಿಮೆಯಲ್ಲಿಗೆ ಆಗಮಿಸುತ್ತಾರೆ. ಕೆವಾಡಿಯಾ ಇನ್ನು ಮುಂದೆ ಸಣ್ಣ ಸ್ಥಳವಲ್ಲ. ಇದು ವಿಶ್ವದ ಅತ್ಯಂತ ಆಕರ್ಷಣೀಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದುವರಿದು, ಭವಿಷ್ಯದಲ್ಲಿ ಪ್ರತಿದಿನವೂ ಒಂದು ಲಕ್ಷದಷ್ಟು ಪ್ರವಾಸಿಗರು ಕೆವಾಡಿಯಾಗೆ ಬರಲಿದ್ದಾರೆ ಎಂದು ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಹೇಳಿದರು.

ಇದೇ ವೇಳೆ ಭಾರತ ರತ್ನ ಎಂಜಿ ರಾಮಚಂದ್ರನ್‌ ಅವರ ಜನ್ಮದಿನದ ಪ್ರಯುಕ್ತ ಗೌರವ ಸಮರ್ಪಿಸಿದ ಮೋದಿ, ‘ಇಂದುಚಾಲನೆ ಪಡೆದ, ಕೆವಾಡಿಯಾಗೆ ಸಂಚರಿಸುವ ರೈಲುಗಳಲ್ಲಿ ಒಂದು ಕ್ರಾಂತಿಕಾರಿ ನಾಯಕ ಎಂಜಿ ರಾಮಚಂದ್ರನ್‌ ಕೇಂದ್ರ ರೈಲು ನಿಲ್ದಾಣ, ಚೆನ್ನೈನಿಂದ ಹೊರಡಲಿದೆ. ಅವರ ಜೀವನವು ಬಡವರ ಸೇವೆಗಾಗಿ ಸಮರ್ಪಿಸಲ್ಪಟ್ಟಿತ್ತು’ ಎಂದು ಸ್ಮರಿಸಿದರು.

ADVERTISEMENT

ತಾವು ಕಿರಿದಾದ ರೈಲ್ವೇ ಗೇಜ್ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದುದಾಗಿ ನೆನಪಿಸಿಕೊಂಡ ಮೋದಿ ಅವರು, ಆಗ ರೈಲು ತುಂಬಾ ನಿಧಾನವಾಗಿ ಚಲಿಸುತ್ತಿತ್ತು. ಬೇಕಾದರೆ ರೈಲು ಸಾಗುತ್ತಿದ್ದಾಗಲೇ ಇಳಿದುಕೊಳ್ಳಬಹುದಿತ್ತು ಮತ್ತು ಏರಬಹುದಾಗಿತ್ತು ಎಂದಿದ್ದಾರೆ. ‘ನೀವು ರೈಲಿನೊಂದಿಗೆ ನಡೆದುಕೊಂಡು ಸಾಗಿದರೆ, ಕೆಲವೊಮ್ಮೆ ನೀವೇ ವೇಗವಾಗಿರುತ್ತಿದ್ದಿರಿ. ನಾನು ನಿತ್ಯ ಪ್ರಯಾಣಿಸುವಾಗ ಇದನ್ನು ಆನಂದಿಸುತ್ತಿದ್ದೆ. ನಾನು ನರ್ಮದಾದಲ್ಲಿ ಸಾಕಷ್ಟು ಸಮಯ ಕಳೆದಿದ್ದು, ಅದು ನನ್ನ ಬದುಕಿನ ಮಹತ್ವದ ಅವಧಿಯಾಗಿದೆ. ಆ ಮಾರ್ಗವನ್ನೀಗ ಬ್ರಾಡ್‌ ಗೇಜ್‌ ಆಗಿ ಪರಿವರ್ತಿಸಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ಕೆವಡಿಯಾ ರೈಲು ನಿಲ್ದಾಣವು ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ದೇಶದ ಮೊದಲ ರೈಲು ನಿಲ್ದಾಣವಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಿರುವ ಪ್ರತಿಮೆಯನ್ನು ನೋಡಲು ಇದೀಗ ದೇಶದ ವಿವಿಧ ಭಾಗಗಳಿಂದ ರೈಲ್ವೆ ಸಂಪರ್ಕ ದೊರೆಯಲಿದೆ.

ಹೊಸದಾಗಿ ಚಾಲನೆ ಪಡೆದಿರುವ ರೈಲುಗಳು ವಾರಣಾಸಿ (ಉತ್ತರ ಪ್ರದೇಶ), ದಾದರ್‌ (ಮಹಾರಾಷ್ಟ್ರ), ಅಹಮದಾಬಾದ್‌ (ಗುಜರಾತ್‌), ಹಜರತ್‌ ನಿಜಾಮುದ್ದೀನ್ (ದೆಹಲಿ), ರೇಕಾ (ಮಧ್ಯಪ್ರದೇಶ), ಚೆನ್ನೈ (ತಮಿಳುನಾಡು), ಪ್ರತಾಪ್‌ನಗರ್‌ (ದೆಹಲಿ) ಪ್ರದೇಶಗಳಿಂದ ಕೆವಾಡಿಯಾಗೆ ಸಂಚರಿಸಲಿವೆ. ಈ ರೈಲುಗಳಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರು ಇನ್ನೂ ಕೆಲವು ರೈಲ್ವೆ ಯೋಜನೆಗಳಿಗೆ ಕೆವಾಡಿಯಾದಲ್ಲಿ ಚಾಲನೆ ನೀಡಿದ್ದಾರೆ. ಅವುಗಳಲ್ಲಿ ದಾಭೋಯ್‌–ಚಾಂದಿದ್ ಬ್ರಾಡ್‌ ಗೇಜ್‌ ರೈಲು ಯೋಜನೆ, ಚಂದೋದ್‌–ಕೆವಾಡಿಯಾ ಹೊಸ ರೈಲ್ವೆ ಮಾರ್ಗ, ಪ್ರತಾಪ್‌ನಗರ್‌–ಕೆವಾಡಿಯ ಹೊಸದಾಗಿ ವಿದ್ಯುದ್ದೀಕರಣಗೊಂಡ ನಿಲ್ದಾಣ ಮತ್ತು ದಾಭೋಯ್‌, ಚಾಂದೋದ್‌, ಕೆವಾಡಿಯಾ ಜಂಕ್ಷನ್‌ಗಳಲ್ಲಿ ಹೊಸ ಕಟ್ಟಡಗಳ ಉದ್ಘಾಟನೆಗಳೂ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.