ಮಥುರಾ: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕನಸು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ನನಸಾಗುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಧಾಮಿ, ಪ್ರಧಾನಿ ಮೋದಿ ಅವರ ತ್ಯಾಗದಿಂದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ. ಇದು ಪ್ರತಿಯೊಬ್ಬ ರಾಮ ಭಕ್ತನ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಹರ್ಷಿಸಿದ್ದಾರೆ.
ರಾಮ ಮಂದಿರ 2024ರ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ.
ಕಾಂಗ್ರೆಸ್ ಪಕ್ಷ ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಡೆಸಲು ಉದ್ದೇಶಿಸಿರುವ 'ಭಾರತ ನ್ಯಾಯ ಯಾತ್ರೆ' ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧಾಮಿ, 'ರಾಮಮಂದಿರ ನಿರ್ಮಾಣದ ಪ್ರಯತ್ನವನ್ನು ವಿಫಲಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ ಇಂತಹ ವ್ಯಕ್ತಿಗಳ ಬಗ್ಗೆ ಜನರಿಗೆ ಗೊತ್ತಿದೆ' ಎಂದಿದ್ದಾರೆ.
ಇದೇವೇಳೆ ಅವರು, ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರಿಗೆ ದೇವಾಲಯ ನಿರ್ಮಾಣವಾಗಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ನಿಷೇಧ ಮಾಡುವುದಾಗಲಿ ಅಥವಾ ತ್ರಿವಳಿ ತಲಾಖ್ ರದ್ದುಗೊಳಿಸುವುದಾಗಲಿ ಸಾಧ್ಯವಾಗಲಿಲ್ಲ ಎನ್ನುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು, ಮೋದಿ ಅವರ ನೇತೃತ್ವದಲ್ಲಿ ಭಾರತವು ನಿರಂತರವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಉತ್ತರಾಖಂಡ ಸಿಎಂ, ಯೋಗಿ ಅವರ ಸಮರ್ಥ ನಾಯಕತ್ವದಲ್ಲಿ ರಾಜ್ಯವು ಅಭಿವೃದ್ಧಿಯ ವಿಚಾರದಲ್ಲಿ ಐತಿಹಾಸಿಕ ಸಾಧನೆ ಮಾಡುತ್ತಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.