ನವದೆಹಲಿ: ಮುಂದಿನ ವಾರ ರವಾಂಡಾಕ್ಕೆ ‘ಐತಿಹಾಸಿಕ ಭೇಟಿ’ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ರವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಅವರ 'ಗಿರಿಂಕಾ' ಎಂಬ ಯೋಜನೆಗೆ ಭಾರತದ ಕೊಡುಗೆಯಾಗಿ ಈ ಹಸುಗಳನ್ನು ನೀಡಲಾಗುತ್ತಿದೆ.
ಏನಿದು ಗಿರಿಂಕಾ ಯೋಜನೆ?
2006 ರಲ್ಲಿ ರವಾಂಡಾ ಸರ್ಕಾರ ಆರಂಭಿಸಿದ ಯೋಜನೆ ಇದು.ಆರ್ಥಿಕವಾಗಿ ಹಿಂದುಳಿದಿರುವ ಪ್ರತಿ ಕುಟುಂಬಕ್ಕೆ ಹಸುವನ್ನು ನೀಡಿ ಸಹಾಯ ಮಾಡುವ ಯೋಜನೆಯಾಗಿದೆ ಇದು. ರವಾಂಡಾ ಭಾಷೆಯಾದ ಕಿನ್ಯಾರ್ವಾಂಡಾ ಭಾಷೆಯಲ್ಲಿ ಗಿರಿಂಕಾ ಎಂದರೆ 'ಹಸುವನ್ನು ಪಡೆಯುವುದು' ಎಂಬರ್ಥವಿದೆ. ಮೂರುವರೆ ಲಕ್ಷಕ್ಕಿಂತ ಹೆಚ್ಚಿನ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಪೂರ್ವ ರವಾಂಡಾದಲ್ಲಿ ರವೇರು ಮಾದರಿ ಗ್ರಾಮದಲ್ಲಿ ಮೋದಿಯವರು ಅಲ್ಲಿನ ಸ್ಥಳೀಯ ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಟಿ.ಎಸ್.ತಿರುಮೂರ್ತಿ, ಹಸುಗಳನ್ನು ಉಡುಗೊರೆಯಾಗಿ ನೀಡುವುದು ಆರ್ಥಿಕ ಕೊಡುಗೆ ಮಾತ್ರ ಅಲ್ಲ ರವಾಂಡಾ ಜನತೆಗೆ ಭಾರತೀಯರು ಸಲ್ಲಿಸುವ ಕೃತಜ್ಞತೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 23ರಿಂದ 27ರ ವರೆಗೆ ಉಗಾಂಡಾ, ರವಾಂಡಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.