ADVERTISEMENT

97ನೇ ವಸಂತಕ್ಕೆ ಕಾಲಿಟ್ಟ ಎಲ್‌.ಕೆ.ಅಡ್ವಾಣಿ: ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2024, 4:55 IST
Last Updated 8 ನವೆಂಬರ್ 2024, 4:55 IST
<div class="paragraphs"><p>ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಎಲ್.ಕೆ.ಅಡ್ವಾಣಿ ಅವರು ಭಾಗಿಯಾಗಿದ್ದ ಸಂದರ್ಭ</p></div>

ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಎಲ್.ಕೆ.ಅಡ್ವಾಣಿ ಅವರು ಭಾಗಿಯಾಗಿದ್ದ ಸಂದರ್ಭ

   

–ಪಿಟಿಐ ಚಿತ್ರ

ನವದೆಹಲಿ: ಬಿಜೆಪಿಯ ಧುರೀಣ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಇಂದು (ಶುಕ್ರವಾರ) 97ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮುಖಂಡರು ಶುಭಕೋರಿದ್ದು, ಪಕ್ಷ ಮತ್ತು ದೇಶಕ್ಕೆ ಅಡ್ವಾಣಿ ಅವರ ಸೇವೆಯನ್ನು ಮುಖಂಡರು ಇದೇ ಸಂದರ್ಭದಲ್ಲಿ ಮೆಲುಕುಹಾಕಿದ್ದಾರೆ.

ADVERTISEMENT

‘ಎಲ್‌.ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ಅಡ್ವಾಣಿ ಅವರಿಗೆ ಈ ವರ್ಷ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಅವರು ದೇಶಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ದೇಶದ ಅತ್ಯಂತ ಮೆಚ್ಚುಗೆ ಪಡೆದ ರಾಜಕೀಯ ನಾಯಕರಲ್ಲಿ ಒಬ್ಬರಾದ ಅಡ್ವಾಣಿ ಅವರು ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಅವರ ಮಾರ್ಗದರ್ಶನ ಪಡೆದಿರುವುದು ನನ್ನ ಅದೃಷ್ಟ. ಸುದೀರ್ಘ, ಆರೋಗ್ಯಕರ ಬದುಕು ಅವರದಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಭಾರತ ರತ್ನ ಗೌರವಾನ್ವಿತ ಎಲ್‌.ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ಅಡ್ವಾಣಿ ಅವರು ಸಾರ್ವಜನಿಕ ಸೇವೆ ಮತ್ತು ಸಂಘಟನಾ ಕೌಶಲ್ಯದ ವಿಶಿಷ್ಟ ಉದಾಹರಣೆ ನೀಡುವ ಮೂಲಕ ಬಿಜೆಪಿಯನ್ನು ಸಾರ್ವಜನಿಕ ಕಲ್ಯಾಣದ ಸಂಕೇತವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿಯ ಸಂಘಟನೆ ಬಲಿಷ್ಠವಾಯಿತು. ದೇಶದ ಮಾಜಿ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿ ಅವರ ಕೆಲಸ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಗೃಹ ಸಚಿವ ಅಮಿತ್ ಶಾ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಭಾರತೀಯ ರಾಜಕೀಯದ ಆಧಾರ ಸ್ತಂಭ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯ ಮೂಲವಾಗಿರುವ ಎಲ್.ಕೆ.ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ಸಾರ್ವಜನಿಕ ಜೀವನದಲ್ಲಿ ಅವರು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೇಶ ಮತ್ತು ಪಕ್ಷ ಎರಡನ್ನೂ ಕಟ್ಟುವಲ್ಲಿ ಅಡ್ವಾಣಿ ಅವರು ವಹಿಸಿದ ಪಾತ್ರ ಅನುಪಮವಾಗಿದೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಡ್ವಾಣಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಕೋರಿದ್ದಾರೆ.

80ರ ದಶಕದಲ್ಲಿ ರಾಮಜನ್ಮಭೂಮಿ ಅಭಿಯಾನದ ನಾಯಕತ್ವ ವಹಿಸಿಕೊಂಡಿದ್ದ ಅಡ್ವಾಣಿ ಅವರು ಬಿಜೆಪಿಯು ದೇಶದಲ್ಲಿ ಸಮೂಹದ ಪಕ್ಷವಾಗಿ ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ಜೊತೆಗೆ ಜನಸಂಘದ ಅವಧಿಯಲ್ಲಿಯೂ ಮುಂಚೂಣಿ ನಾಯಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.