ADVERTISEMENT

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ಕಾರ್ಯಕ್ರಮಕ್ಕೆ ಆಗಮಿಸಿದ ದೇವೇಗೌಡರಿಗೆ ಮೋದಿ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2024, 11:09 IST
Last Updated 22 ಜನವರಿ 2024, 11:09 IST
<div class="paragraphs"><p>ಎಚ್‌.ಡಿ. ದೇವೇಗೌಡರಿಗೆ ಪ್ರಧಾನಿ ಮೋದಿ ಅವರು ತಲೆಬಾಗಿ ನಮಿಸಿದ ಕ್ಷಣ</p></div>

ಎಚ್‌.ಡಿ. ದೇವೇಗೌಡರಿಗೆ ಪ್ರಧಾನಿ ಮೋದಿ ಅವರು ತಲೆಬಾಗಿ ನಮಿಸಿದ ಕ್ಷಣ

   

ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ಇಂದು (ಸೋಮವಾರ) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ.

ಹಲವು ರಾಜ್ಯಗಳ ರಾಜಕೀಯ ನಾಯಕರು, ಬಾಲಿವುಡ್‌ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಪ್ರಧಾನಿ ಮೋದಿ ಅವರು ತಲೆ ಬಾಗಿ ನಮಿಸಿದ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಕರ್ನಾಟಕದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಅಯೋಧ್ಯೆಯಲ್ಲಿ ಅರ್ಚಕರು, ಪಂಡಿತರು, ಸಂತರ ಸಮ್ಮುಖದಲ್ಲಿ ಬಾಲರಾಮನ ಪಟ್ಟಾಭಿಷೇಕದ ವಿಧಿವಿಧಾನಗಳನ್ನು ಮೋದಿ ಅವರು ನೆರವೇರಿಸಿದರು. ಬಳಿಕ ರಾಮನ ಪಾದಗಳಿಗೆ ಪುಷ್ಪ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವಾಲಯದ ಒಳಗೆ ನೆರೆದವರ ಶ್ರೀರಾಮ.. ಜಯರಾಮ.. ಎಂಬ ರಾಮನಾಮ ಮುಗಿಲುಮುಟ್ಟಿತ್ತು. ಮಂತ್ರಘೋಷಗಳು ಮೊಳಗಿದ್ದವು, ವಾದ್ಯಗಳ ನಾದ ದೇವಾಲಯವನ್ನು ಆವರಿಸಿತ್ತು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಇಬ್ಬರು ಪ್ರಧಾನ ಅರ್ಚಕರು ಗರ್ಭಗುಡಿಯಲ್ಲಿದ್ದರು.

ಮೋದಿಯವರ ಸಮ್ಮುಖದಲ್ಲಿ ಬಾಲರಾಮನ ವಿಗ್ರಹವನ್ನು ಅನಾವರಣಗೊಳಿಸುತ್ತಿದ್ದಂತೆ ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್‌ಗಳು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯದ ಮೇಲೆ ಹೂವಿನ ಮಳೆಗೈದವು.

ಕನ್ನಡಿಗ ಅರುಣ್‌ ಯೋಗಿರಾಜ್‌ ಕೆತ್ತಿದ ಬಾಲರಾಮನ ಮೂರ್ತಿ ಇಂದು ಅಯೋಧ್ಯೆಯಲ್ಲಿ ಸ್ಥಾಪನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.