ನವದೆಹಲಿ: ಯಾವುದೇ ಪಕ್ಷವನ್ನು ಅಥವಾ ವ್ಯಕ್ತಿಯನ್ನು ವಿರೋಧಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿ. ಆದರೆ ಅದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಇರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಚೌಧರಿ ಹರ್‌ಮೋಹನ್ ಸಿಂಗ್ ಯಾದವ್ ಅವರ 10ನೇ ಪುಣ್ಯ ತಿಥಿ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಿದ್ಧಾಂತಗಳಿಗೆ ಅವುಗಳದ್ದೇ ಆದ ಸ್ಥಾನ ಇದೆ. ಆದರೆ, ಸಮಾಜ, ದೇಶವೇ ಮೊದಲಾಗಬೇಕು’ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿದ್ದಾಗ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಅದರ ವಿರುದ್ಧ ಹಾಗೂ ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ಒಗ್ಗಟ್ಟಿನಿಂದ ಹೋರಾಡಿದ್ದವು. ಚೌಧರಿ ಹರ್‌ಮೋಹನ್ ಸಿಂಗ್ ಯಾದವ್ ಅವರೂ ತುರ್ತು ಪರಿಸ್ಥಿತಿ ವಿರುದ್ಧ ವೀರ ಯೋಧನಂತೆ ಹೋರಾಡಿದ್ದರು ಎಂದು ಮೋದಿ ನೆನಪಿಸಿಕೊಂಡರು.
‘ನೂತನ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಿದ ಈ ದಿನ ನಮ್ಮ ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಮಹತ್ವದ ದಿನ. ಸ್ವಾತಂತ್ರ್ಯ ದೊರೆತ ಬಳಿಕ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.