ಮುಂಬೈ: ಮಹಾನಗರ ಮುಂಬೈ ಹಾಗೂ ಉಪನಗರ ನವಿ ಮುಂಬೈ ನಡುವೆ ಹೊಸದಾಗಿ ನಿರ್ಮಿಸಲಾಗಿರುವ ‘ಅಟಲ್ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.
ಅಟಲ್ ಸೇತು ಯೋಜನೆಯನ್ನು ಪೂರ್ಣಗೊಳಿಸಿರುವುದು ‘ಮೋದಿಯ ಗ್ಯಾರಂಟಿ’ ಎಂದು ಹೇಳುವ ಮೂಲಕ ಅವರು ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿಸಿದರು.
ದಕ್ಷಿಣ ಮುಂಬೈ ಪ್ರದೇಶವನ್ನು ನವಿ ಮುಂಬೈನ ನವ–ಶೇವಾ ಪ್ರದೇಶದ ಜೊತೆ ಸಂಪರ್ಕಿಸುವ ಈ ಸೇತುವೆಯು ಭಾರತದ ಅತಿ ಉದ್ದದ ಸೇತುವೆ. ಇದು ದೇಶದಲ್ಲಿ ಸಮುದ್ರದ ಮೇಲೆ ಸಾಗುವ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಈ ಸೇತುವೆಗೆ ಶಂಕುಸ್ಥಾಪನೆಯನ್ನು ಮೋದಿ ಅವರು 2016ರ ಡಿಸೆಂಬರ್‌ನಲ್ಲಿ ನಡೆಸಿದ್ದರು. ‘ಹಲವು ಅಡ್ಡಿಗಳನ್ನು ಎದುರಿಸುತ್ತಿದ್ದ ಈ ಸೇತುವೆಯ ಶಂಕುಸ್ಥಾಪನೆಗೆ ನಾನು 2016ರ ಡಿಸೆಂಬರ್‌ನಲ್ಲಿ ಬಂದಿದ್ದಾಗ, ದೇಶದಲ್ಲಿ ಬದಲಾವಣೆ ತರುವ ನಿರ್ಣಯ ಕೈಗೊಂಡಿದ್ದೆ. ಕೋವಿಡ್–19 ಸಾಂಕ್ರಾಮಿಕದ ನಡುವೆಯೂ ಈ ಸೇತುವೆ ಕಾರ್ಯ ಪೂರ್ಣಗೊಳಿಸಿರುವುದು ಬಹಳ ಮಹತ್ವದ್ದು’ ಎಂದು ಅವರು ಪನ್ವೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
‘ಬೃಹತ್ ಯೋಜನೆಗಳ ಕೆಲಸ ಸ್ಥಗಿತಗೊಂಡಿದ್ದನ್ನು ಕಂಡು ಜನ ರೋಸಿಹೋಗಿದ್ದರು. ಬೃಹತ್ ಯೋಜನೆಗಳು ಪೂರ್ಣಗೊಳ್ಳುತ್ತವೆ ಎಂಬ ಭರವಸೆಯನ್ನೇ ಅವರು ಕಳೆದುಕೊಂಡಿದ್ದರು. ಆದರೆ, ದೇಶದಲ್ಲಿ ಬದಲಾವಣೆ ತರುವುದು ಮೋದಿಯ ಗ್ಯಾರಂಟಿ ಆಗಿತ್ತು’ ಎಂದರು.
‘ಸಮುದ್ರದ ಮೇಲೆ ಸಾಗುವ ಸೇತುವೆಯು ವಿಕಸಿತ ಭಾರತದ ಪ್ರತಿಬಿಂಬ... ಇದು ಭಾರತದ ಮೂಲಸೌಕರ್ಯ ವಲಯದ ಶಕ್ತಿಯನ್ನು ಹಾಗೂ ಭಾರತವು ಅಭಿವೃದ್ಧಿ ಹೊಂದಿದ ದೇಶ ಆಗುವೆಡೆ ಸಾಗುತ್ತಿರುವುದನ್ನು ತೋರಿಸುತ್ತಿದೆ’ ಎಂದು ಹೇಳಿದರು. ಇದೇ ವೇದಿಕೆಯಿಂದ ಮೋದಿ ಅವರು ಇನ್ನೂ ಕೆಲವು ಸ್ಥಳೀಯ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.
ದೇಶದ ಅಭಿವೃದ್ಧಿಗೆ ಪ್ರತಿಯೊಂದು ಬೃಹತ್ ಯೋಜನೆಯೂ ಮಹತ್ವದ್ದು ಎಂದು ಹೇಳಿದ ಅವರು, ‘ನಮ್ಮ ಪಾಲಿಗೆ ಇದು ಒಂದು ದಿನದ ಕಾರ್ಯಕ್ರಮ ಅಲ್ಲ ಅಥವಾ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ಕೆಲಸವೂ ಅಲ್ಲ’ ಎಂದರು.
‘ನಮ್ಮ ಉದ್ದೇಶ ಸ್ವಚ್ಛವಾಗಿದೆ, ನಮ್ಮ ನಿಷ್ಠೆಯು ದೇಶದ ಅಭಿವೃದ್ಧಿಯ ಕಡೆ ಇದೆ. ಆದರೆ ಹಿಂದಿನ ಸರ್ಕಾರದ ಉದ್ದೇಶವು ಮತಬ್ಯಾಂಕ್ ಬಗ್ಗೆ ಕಾಳಜಿ ವಹಿಸುವುದು ಹಾಗೂ ತನ್ನ ಕಿಸೆ ಭರ್ತಿ ಮಾಡಿಕೊಳ್ಳುವುದಾಗಿತ್ತು. ಅವರ ಬದ್ಧತೆಯು ದೇಶಕ್ಕಾಗಿ ಇರದೆ ಕುಟುಂಬದ ಸದಸ್ಯರ ಬಗ್ಗೆ ಇತ್ತು’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.