ADVERTISEMENT

‘ಆಯುಷ್ಮಾನ್‌’ ವಿಸ್ತರಣೆಗೆ ಮೋದಿ ಚಾಲನೆ

₹12,850 ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ: 70 ದಾಟಿದವರಿಗೆ ಆರೋಗ್ಯ ವಿಮೆ

ಪಿಟಿಐ
Published 29 ಅಕ್ಟೋಬರ್ 2024, 14:21 IST
Last Updated 29 ಅಕ್ಟೋಬರ್ 2024, 14:21 IST
<div class="paragraphs"><p>‘ಆಯುಷ್ಮಾನ್‌ ಭಾರತ್’ ಆರೋಗ್ಯ ವಿಮಾ ಭದ್ರತೆ ಯೋಜನೆಯನ್ನು 70 ವರ್ಷ ಮೀರಿದ ಎಲ್ಲ ನಾಗರಿಕರಿಗೆ ವಿಸ್ತರಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಆಯುಷ್ಮಾನ್‌ ವಯ ವಂದನ ಕಾರ್ಡ್‌’ ಅನ್ನು&nbsp;ಸಾಂಕೇತಿಕವಾಗಿ ‌ಹಿರಿಯರೊಬ್ಬರಿಗೆ ಹಸ್ತಾಂತರಿಸಿದರು.  </p></div>

‘ಆಯುಷ್ಮಾನ್‌ ಭಾರತ್’ ಆರೋಗ್ಯ ವಿಮಾ ಭದ್ರತೆ ಯೋಜನೆಯನ್ನು 70 ವರ್ಷ ಮೀರಿದ ಎಲ್ಲ ನಾಗರಿಕರಿಗೆ ವಿಸ್ತರಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಆಯುಷ್ಮಾನ್‌ ವಯ ವಂದನ ಕಾರ್ಡ್‌’ ಅನ್ನು ಸಾಂಕೇತಿಕವಾಗಿ ‌ಹಿರಿಯರೊಬ್ಬರಿಗೆ ಹಸ್ತಾಂತರಿಸಿದರು.

   

ಪಿಟಿಐ ಚಿತ್ರ

ನವದೆಹಲಿ: 70 ವರ್ಷ ಮೀರಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್ ಯೋಜನೆ ಸೌಲಭ್ಯ ವಿಸ್ತರಣೆಯನ್ನು ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ, ₹12,850 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಗಳಿಗೂ ಚಾಲನೆ ನೀಡಿದರು.

ADVERTISEMENT

ಒಂಬತ್ತನೇ ಆಯುರ್ವೇದ ದಿನ ಮತ್ತು ಆಯುರ್ವೇದ ಚಿಕಿತ್ಸೆಯ ಹರಿಕಾರ ಎನ್ನಲಾದ ಧನ್ವಂತರಿ ಜನ್ಮ ವಾರ್ಷಿಕೋತ್ಸವ ದಿನದಂದೇ, ಆಯುಷ್ಮಾನ್‌ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. 

ನವದೆಹಲಿಯಲ್ಲಿ ಸ್ಥಾಪಿಸಲಾದ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಪ್ರಧಾನಿ ಉದ್ಘಾಟಿಸಿದರು. ಪಂಚಕರ್ಮ ಆಸ್ಪತ್ರೆ, ಔಷಧ ಉತ್ಪಾದನೆಯ ಆಯುರ್ವೇದ ಫಾರ್ಮಸಿ, ಕ್ರೀಡಾ ವೈದ್ಯಕೀಯ ಘಟಕ, ಗ್ರಂಥಾಲಯ, ಐ.ಟಿ ಮತ್ತು ನವೋದ್ಯಮ ಚಿಂತನಾ ಘಟಕ, 500 ಆಸನ ಸಾಮರ್ಥ್ಯದ ಸಭಾಂಗಣವನ್ನು ಇದು ಒಳಗೊಂಡಿದೆ.

ಇದೇ ವೇಳೆ, ಅವರು ಕರ್ನಾಟಕದ ಬೊಮ್ಮಸಂದ್ರ ಮತ್ತು ನರಸಾಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೊಸದಾಗಿ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದರು.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 21 ತುರ್ತು ನಿಗಾ ಘಟಕಗಳ ಸ್ಥಾಪನೆ, ಮಧ್ಯಪ್ರದೇಶದಲ್ಲಿ ಐದು ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಒಳಗೊಂಡಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಆರೋಗ್ಯ ಸೇವೆ ಒದಗಿಸಲು ಡ್ರೋನ್ ತಂತ್ರಜ್ಞಾನ ಬಳಸುವ ಯೋಜನೆಯನ್ನು ದಕ್ಷಿಣ ಭಾರತದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ 11 ವಿವಿಧ ಏಮ್ಸ್‌ಗಳಲ್ಲಿ ಆರಂಭಿಸಲು ಚಾಲನೆ ನೀಡಲಾಯಿತು. 

ಋಷಿಕೇಷದ ಏಮ್ಸ್‌ನಲ್ಲಿ ಹೆಲಿಕಾಪ್ಟರ್‌ ವೈದ್ಯಕೀಯ ತುರ್ತು ಸೇವೆ,  ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಡಿಜಿಟಲೀಕರಣದ ಯು–ವಿನ್‌ ಪೋರ್ಟಲ್‌ಗೂ ಚಾಲನೆ ನೀಡಲಾಯಿತು.  

ಮಧ್ಯಪ್ರದೇಶದಲ್ಲಿ ಮೂರು ವೈದ್ಯಕೀಯ ಕಾಲೇಜು ಸ್ಥಾಪನೆ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ನವದೆಹಲಿಯಲ್ಲಿ ಹೊಸ ಏಮ್ಸ್‌ಗಳನ್ನು ಉದ್ಘಾಟಿಸಿದರು.

ಆಯುಷ್ಮಾನ್‌ ಭಾರತ್ ಯೋಜನೆ ಅಪ್ರಾಯೋಗಿಕವಾದುದು. ಅರ್ಹತೆ ಕಾರಣದಿಂದ ದೆಹಲಿಯಲ್ಲಿ ಒಬ್ಬರಿಗೂ ಲಾಭವಿಲ್ಲ. ಈ ಯೋಜನೆಯು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅತಿದೊಡ್ಡ ಹಗರಣ
ಸಂಜಯ್ ಸಿಂಗ್ ಎಎಪಿ ರಾಜ್ಯಸಭೆ ಸದಸ್ಯ

ದೆಹಲಿ ಬಂಗಾಳದಲ್ಲಿ ಯೋಜನೆಗೆ ರಾಜಕೀಯ ಗೋಡೆ–ಪ್ರಧಾನಿ ‘ಎಲ್ಲ ಹಿರಿಯರಿಗೆ ಆರೋಗ್ಯ ವಿಮೆ ಭದ್ರತೆ ನೀಡುವ ‘ಆಯುಷ್ಮಾನ್‌ ಭಾರತ್’  ಯೋಜನೆಯನ್ನು ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ರಾಜಕೀಯ ಹಿತಾಸಕ್ತಿಗಾಗಿ ಜಾರಿಗೊಳಿಸಿಲ್ಲ’ ಎಂದು ಪ್ರಧಾನಿ ಟೀಕಿಸಿದರು.  ‘ದೆಹಲಿ ಪಶ್ಚಿಮ ಬಂಗಾಳದಲ್ಲಿರುವ 70 ವರ್ಷ ಮೀರಿದ ಎಲ್ಲ ಹಿರಿಯರಲ್ಲಿ ನಾನು ಕ್ಷಮೆ ಕೋರುತ್ತೇನೆ. ನಿಮಗೆ ಸೇವೆ ಒದಗಿಸಲು ಆಗುತ್ತಿಲ್ಲ. ನಿಮ್ಮ ನೋವು ಅರ್ಥವಾಗುತ್ತದೆ. ಆದರೆ ನೆರವಾಗಲು ನನಗೆ ಆಗುತ್ತಿಲ್ಲ’ ಎಂದು ಹೇಳಿದರು. ‘ಅವರ ರಾಜಕೀಯ ಹಿತಾಸಕ್ತಿ ಕಾರಣಕ್ಕೆ ಈ ರಾಜ್ಯಗಳು ತಡೆಯೊಡ್ಡಿವೆ. ನಾನು ಸೇವೆ ಒದಗಿಸಲು ಸಿದ್ಧನಿದ್ದೇನೆ. ಆದರೆ ಈ ರಾಜ್ಯಗಳಲ್ಲಿ ರಾಜಕೀಯ ಗೋಡೆ ಅಡ್ಡಿಯಾಗಿದೆ. ತಮ್ಮದೇ ರಾಜ್ಯದ ಹಿರಿಯ ನಾಗರಿಕರಿಗೆ ಸೌಲಭ್ಯವನ್ನು ತಡೆಯುವ ಈ ನಡೆಯು ಅಮಾನವೀಯವಾದುದು’ ಎಂದು ಮೋದಿ ಟೀಕಿಸಿದರು.  2025ರಲ್ಲಿ ದೆಹಲಿ ಹಾಗೂ 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.