ADVERTISEMENT

ಹಳೆಯ ಕಥೆಗಳಲ್ಲಿ ಬರುವ ಅಹಂಕಾರಿ ರಾಜನಂತೆ ಪ್ರಧಾನಿ ಮೋದಿ: ಪ್ರಿಯಾಂಕಾ ಗಾಂಧಿ

ಪಿಟಿಐ
Published 20 ಫೆಬ್ರುವರಿ 2021, 14:45 IST
Last Updated 20 ಫೆಬ್ರುವರಿ 2021, 14:45 IST
ಪ್ರಿಯಾಂಕಾ ಗಾಂಧಿ (ಪಿಟಿಐ ಚಿತ್ರ)
ಪ್ರಿಯಾಂಕಾ ಗಾಂಧಿ (ಪಿಟಿಐ ಚಿತ್ರ)   

ಲಖನೌ: ಹಳೆಯ ಕಥೆಗಳಲ್ಲಿ ಬರುವ ಕೋಪಿಷ್ಠ ರಾಜನಂತೆ ಪ್ರಧಾನಿ ನರೇಂದ್ರ ಮೋದಿ. ಅವರೊಬ್ಬ ‘ಅಹಂಕಾರಿ ರಾಜ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ಮುಜಾಫರ್‌ನಗರದಲ್ಲಿ ನಡೆದ ‘ಕಿಸಾನ್‌ ಮಹಾಪಂಚಾಯತ್‌’ ಉದ್ದೇಶಿಸಿ ಮಾತನಾಡಿದ ಅವರು, ‘ದೇಶ ಕಾಯುವ ಯೋಧ ಕೂಡ ರೈತನ ಮಗ ಎಂಬುದನ್ನು ಅರ್ಥಮಾಡಿಕೊಳ್ಳಲು ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯೂ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ಪ್ರಿಯಾಂಕಾ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ರೈತರ ಮಾತನ್ನು ಮೋದಿ ಕೇಳುತ್ತಿಲ್ಲ. ಯಾಕೆಂದರೆ ಅವರ ರಾಜಕೀಯವು ಅವರ ಕೋಟ್ಯಧಿಪತಿ ಸ್ನೇಹಿತರನ್ನು ಉದ್ದೇಶಿಸಿದ್ದು ಎಂದು ಅವರು ಹೇಳಿದ್ದಾರೆ.

‘ಜನರು ಅವರ ಮುಂದೆ ಸತ್ಯ ಹೇಳಲು ಭಯಪಡುತ್ತಿದ್ದಾರೆ. ಗೊಣಗುತ್ತಿದ್ದಾರೆ. ಇದು ನಮ್ಮ ಪ್ರಧಾನಿಯೂ ‘ಅಹಂಕಾರಿ ರಾಜ’ನಾಗಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಹೊಸ ಕೃಷಿ ಕಾಯ್ದೆಗಳಿಂದ ‘ಮಂಡಿ’ಗಳು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊನೆಯಾಗಲಿದೆ ಎಂದೂ ಅವರು ಹೇಳಿದ್ದಾರೆ.

‘ನಿಮ್ಮ ಹಕ್ಕುಗಳು ಕೊನೆಯಾಗಲಿವೆ. ಇಡೀ ದೇಶವನ್ನು ಇಬ್ಬರು–ಮೂವರು ಸ್ನೇಹಿತರಿಗೆ ಮಾರಾಟ ಮಾಡಿದ ರೀತಿಯಲ್ಲೇ ಅವರು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ನಿಮ್ಮ ಗಳಿಕೆಯನ್ನೂ ಕೋಟ್ಯಧಿಪತಿ ಗೆಳೆಯರಿಗೆ ಮಾರಾಟ ಮಾಡಲಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.