ADVERTISEMENT

ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಯಾನ; ಚರ್ಚೆಯಾದ ಕಡತ ಪರಿಶೀಲನೆ ಚಿತ್ರ!

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 1:35 IST
Last Updated 24 ಸೆಪ್ಟೆಂಬರ್ 2021, 1:35 IST
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಚಿತ್ರವು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಚಿತ್ರದ ಜತೆಗೆ ಮೋದಿ ಅವರು, ‘ದೀರ್ಘವಾದ ವಿಮಾನ ಪ್ರಯಾಣವೆಂದರೆ ಅದು, ಕಡತಗಳು ಮತ್ತು ಕಾಗದಗಳನ್ನು ಪರಿಶೀಲಿಸಲು ಒಂದು ಅವಕಾಶ’ ಎಂದು ಬರೆದಿದ್ದರು. ಈ ಟ್ವೀಟ್‌ ಈಗ ವೈರಲ್ ಆಗಿದೆ. ಮೋದಿ ಅವರು ತಾವೊಬ್ಬರೇ ಸದಾ ಕೆಲಸ ಮಾಡುತ್ತೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದಿನ ಪ್ರಧಾನಿಗಳೂ ಈ ರೀತಿ ವಿಮಾನಯಾನದ ವೇಳೆ ಕೆಲಸ ಮಾಡಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದ ಚಿತ್ರ

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿಮಾನಯಾನದ ವೇಳೆ ಕಡತ ಪರಿಶೀಲಿಸುತ್ತಿರುವ ಚಿತ್ರವನ್ನು ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ‘ಹಳೆಯ ಚಿತ್ರ: ನನ್ನ ತಾತ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ವಿಮಾನದಲ್ಲಿ ಕಡತ ಪರಿಶೀಲಿಸಿದ ಚಿತ್ರ’ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT
ವಿಭಾಕರ್ ಶಾಸ್ತ್ರಿ ಅವರು ಟ್ವೀಟ್ ಮಾಡಿದ್ದ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿತ್ರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ವಿಮಾನಯಾನದ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಚಿತ್ರವನ್ನು @NotAfangirll_ ಎಂಬ ಹ್ಯಾಂಡಲ್‌ನಿಂದ ಒಬ್ಬರು ಟ್ವೀಟ್ ಮಾಡಿದ್ದಾರೆ.

@NotAfangirll_ ಎಂಬುವವರು ಟ್ವೀಟ್ ಮಾಡಿದ್ದ ರಾಜೀವ್ ಗಾಂಧಿ ಅವರ ಚಿತ್ರ

‘ಈಗಿನ ಆಡಳಿತದಲ್ಲಿ ನಾವು ಎಷ್ಟು ಹಿಂದೆ ಸರಿಯುತ್ತಿದ್ದೇವೆ ಅಲ್ಲವೇ? 80ರ ದಶಕದಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು ವಿಮಾನಯಾನದ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮೋದಿಜೀ ಅವರು ಕಾಗದ ಬಳಸುತ್ತಿದ್ದಾರೆ?’ ಎಂದು ಅವರು ಬರೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿರುವ ಚಿತ್ರವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ‘ನಕಲು ಮಾಡಲು ಕಷ್ಟವಾದ ಚಿತ್ರ’ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ

ಮತ್ತೊಬ್ಬರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಮಾನಯಾನದ ವೇಳೆ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ವಿಮಾನಯಾನದ ವೇಳೆ ಕಡತ ಪರಿಶೀಲಿಸುತ್ತಿರುವ ಚಿತ್ರವನ್ನು ಪುನೀತ್ ಅಗರ್ವಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಚಿತ್ರಗಳೂ ವೈರಲ್ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.