ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದರು.
ರಾಷ್ಟ್ರ ರಾಜಧಾನಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಕರ್ಪೂರಿ ಅವರ ಪುತ್ರ ರಾಜ್ಯಸಭಾ ಸದಸ್ಯ ಮತ್ತು ಜೆಡಿಯು ನಾಯಕ ರಾಮ್ ನಾಥ್ ಠಾಕೂರ್ ಅವರ ಮನೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕುಟುಂಬ ಸದಸ್ಯರನ್ನು ಅಭಿನಂದಿಸಿದರು.
'ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಜನನಾಯಕ ಕರ್ಪೂರಿ ಠಾಕೂರ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ. ಕರ್ಪೂರಿ ಅವರು ಸಮಾಜದ ಹಿಂದುಳಿದ ಮತ್ತು ವಂಚಿತ ವರ್ಗಗಳ ನಾಯಕರಾಗಿದ್ದಾರೆ. ಅವರ ಜೀವನ ಮತ್ತು ಆದರ್ಶಗಳು ದೇಶದ ಜನರಿಗೆ ಸ್ಫೂರ್ತಿ ನೀಡುತ್ತವೆ' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ತಮ್ಮ ಕುಟುಂಬದ ಪರವಾಗಿ, ಬಿಹಾರದ ಪರವಾಗಿ, ದಮನಿತರು, ದಲಿತರು, ಹಿಂದುಳಿದ ಸಮುದಾಯಗಳ ಪರವಾಗಿ ಈ ಗೌರವಕ್ಕಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದು ರಾಮ್ ನಾಥ್ ಠಾಕೂರ್ ಹೇಳಿದ್ದಾರೆ.
‘ದೀಪಾವಳಿಯಂತೆಯೇ ಇದು ನಮಗೆ ಸಂತೋಷದ ಕ್ಷಣವಾಗಿತ್ತು. ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದೆವು' ಎಂದು ಕರ್ಪೂರಿ ಠಾಕೂರ್ ಮೊಮ್ಮಗ ರಂಜಿತ್ ಕುಮಾರ್ ಹೇಳಿದ್ದಾರೆ.
ಪ್ರಶಸ್ತಿ ಘೋಷಣೆಯಾದ ಒಂದು ದಿನದ ನಂತರ ಪ್ರಧಾನಿ ಕರೆ ಮಾಡಿದ್ದು, ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಮಾತನಾಡಿದರು. ದೆಹಲಿಯಲ್ಲಿ ಅವರನ್ನು ಭೇಟಿಯಾಗಲು ಆಹ್ವಾನಿಸಿದ್ದಾರೆ. ಪ್ರಧಾನಿ ನಮ್ಮ ಕುಟುಂಬದಲ್ಲಿ ಒಬ್ಬರು ಎಂದು ನಾನು ಭಾವಿಸಿದ್ದೇನೆ ಎಂದು ರಂಜಿತ್ ತಿಳಿಸಿದ್ದಾರೆ.
ಜನ ನಾಯಕ ಎಂದೇ ಕರೆಯಲ್ಪಡುವ ಕರ್ಪೂರಿ ಠಾಕೂರ್ ಅವರು 1970ರ ಡಿಸೆಂಬರ್ ನಿಂದ 1971ರ ಜೂನ್‌ವರೆಗೆ ಮತ್ತು 1977ರ ಡಿಸೆಂಬರ್ ನಿಂದ 1979ರ ಏಪ್ರಿಲ್ ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.