ADVERTISEMENT

370ನೇ ವಿಧಿ ರದ್ದು ವಿರೋಧಿಸುವವರ ಹೃದಯ ನಕ್ಸಲರಿಗೆ,ಉಗ್ರರಿಗೆ ಮಿಡಿಯುತ್ತದೆ: ಮೋದಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 11:18 IST
Last Updated 14 ಆಗಸ್ಟ್ 2019, 11:18 IST
   

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸುವವರು ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಮನೆತನದವರು ಮತ್ತು ಉಗ್ರರ ಬಗ್ಗೆ ಅನುಕಂಪ ಹೊಂದಿರುವವರು ಆಗಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆನೀಡಿದ ಸಂದರ್ಶನದಲ್ಲಿ ಮಾತನಾಡಿದ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ತೀರ್ಮಾನ ದೇಶದ ಹಿತಾಸಕ್ತಿಗಾಗಿ ತೆಗೆದುಕೊಂಡಿದ್ದು, ಅದು ರಾಜಕೀಯ ಅಲ್ಲ ಎಂದಿದ್ದಾರೆ.

ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ವಿಶೇಷಾಧಿಕಾರ ಅಂತ್ಯಗೊಳಿಸಿದ್ದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.

ADVERTISEMENT

ಸಾಮಾನ್ಯ ಜನರಿಗೆ ಸಹಾಯವಾಗುವಂತ ಯಾವುದೇ ಕೆಲಸ ಮಾಡಿದರೂ ಪ್ರತಿಭಟನೆ ಮಾಡಲು ಬರುವ ಜನರು ಇವರೇ.ಜನರಿಗೆ ನೀರು ಕೊಡುವ ಯೋಜನೆ ಬಂದರೂ ಅವರು ಅದನ್ನು ವಿರೋಧಿಸುತ್ತಾರೆ.ರೈಲ್ವೆ ಹಳಿ ನಿರ್ಮಾಣಕ್ಕೂ ಅವರ ವಿರೋಧ ಇದ್ದೇ ಇರುತ್ತದೆ. ಸಾಮಾನ್ಯ ನಾಗರಿಕರನ್ನು ಪೀಡಿಸುವ ಮಾವೋವಾದಿ ಮತ್ತು ಉಗ್ರರಿಗಾಗಿ ಮಾತ್ರ ಅವರ ಹೃದಯತುಡಿಯುತ್ತದೆ ಎಂದು ಮೋದಿ ಹೇಳಿದ್ದಾರೆ.

370ನೇ ವಿಧಿ ರದ್ದು ಮಾಡಿದ ನಂತರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವರದ್ದೇ ಆದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು.ಅಲ್ಲಿ ಶಾಸಕರು ಹೇಗಿದ್ದರೋ ಅದೇ ರೀತಿಯಲ್ಲಿ ಶಾಸಕರನ್ನು, ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು.ಸರ್ಕಾರದ ಈ ಹೊಸ ನಿರ್ಧಾರ ಬಗ್ಗೆ ನನಗೆ ಪೂರ್ಣ ನಂಬಿಕೆ ಇದೆ.ಪ್ರತ್ಯೇಕತಾವಾದ ಮತ್ತು ಉಗ್ರವಾದದಿಂದ ಕಾಶ್ಮೀರ ಮುಕ್ತವಾಗುತ್ತದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.