ನವದೆಹಲಿ: ಬಸವ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಕನ್ನಡದಲ್ಲೇ ಟ್ವೀಟ್ ಮಾಡಿರುವ ಅವರು, ‘ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಜಗದ್ಗುರು ಬಸವೇಶ್ವರರು ತೋರಿಸಿಕೊಟ್ಟ ಹಾದಿಯನ್ನು ನಾವು ಸದಾ ಪಾಲಿಸುತ್ತೇವೆ. ಅವರಿಗೆ ಗೌರವ ಸಲ್ಲಿಸಲು ಅನೇಕ ಅವಕಾಶಗಳು ಒದಗಿರುವುದು ನನ್ನ ಸೌಭಾಗ್ಯ ಎಂದು ಮೋದಿ ತಿಳಿಸಿದ್ದಾರೆ.
ಕಾಯಕ, ದಾಸೋಹದ ಮಹತ್ವದೊಂದಿಗೆ ಸಮ ಸಮಾಜ ನಿರ್ಮಿಸಲು ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಅವರು ನೀಡಿದ ವಚನಗಳ ರೂಪದಲ್ಲಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮ ಸಮಾಜ ನಿರ್ಮಿಸಲು ಹಾಗೂ ಸಮಾಜದಲ್ಲಿ ನೊಂದವರ, ಶೋಷಿತರ ಪರ ನಮ್ಮ ಆಡಳಿತದಲ್ಲಿ ಮಹತ್ತರ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಬಸವಣ್ಣನವರ ಚಿಂತನೆಗಳು ನನಗೆ ಸ್ಪೂರ್ತಿಯಾಗಿದ್ದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಮಹಾನ್ ಮಾನವತಾವಾದಿ, ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ, ಇಂದು ವಿಧಾನಸೌಧದ ಮುಂಭಾಗದಲ್ಲಿರುವ, ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಶ್ರದ್ಧಾ ಭಕ್ತಿಯಿಂದ ನಮಿಸಿ, ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಅನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಜಯವಾಹಿನಿ’ ಯಾತ್ರೆಗೂ ಮುನ್ನ ಬೆಂಗಳೂರಿನ ಬಸವೇಶ್ವರ ವೃತ್ತದ, ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಶ್ರದ್ಧಾ ಭಕ್ತಿಯಿಂದ ನಮಿಸಿ, ವಿಶ್ವಗುರು ಬಸವಣ್ಣನವರ ಆಶೀರ್ವಾದ ಪಡೆದುಕೊಂಡೆನು ಬೊಮ್ಮಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.