ನವದೆಹಲಿ: ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸುರಂಗದೊಳಗೆ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪ್ರಗತಿ ಮೈದಾನದ ಏಕೀಕೃತ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದರು. ಹೊಸ ಸುರಂಗವು 1.6 ಕಿ.ಮೀ. ಉದ್ದವಿದೆ.
ಸುರಂಗದ ಪರಿಶೀಲನೆ ನಡೆಸುತ್ತಿದ್ದಾಗ ಮೋದಿ ಅವರಿಗೆ ಬಳಸಿ ಬಿಸಾಡಿದ್ದ ಬಾಟಲಿ ಕಾಣಿಸಿತು. ಅದನ್ನು ಎತ್ತಿ ಕೈಯಲ್ಲಿ ಹಿಡಿದು ಮುಂದೆ ನಡೆದಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಮೋದಿ ಭೇಟಿ ನೀಡಿದ ಸ್ಥಳದಲ್ಲೆಲ್ಲ 'ಸ್ವಚ್ಛ ಭಾರತದ' ಆಶಯವನ್ನು ಒಂದಿಲ್ಲೊಂದು ರೀತಿ ಸಾರುವ ಪ್ರಯತ್ನ ನಡೆಸಿರುವುದನ್ನು ಗಮನಿಸಬಹುದಾಗಿದೆ.
2019ರ ಅಕ್ಟೋಬರ್ 12ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಾಮಲ್ಲಪುರಂ ಸಮುದ್ರ ತೀರದಲ್ಲಿ 'ಪ್ಲಾಗಿಂಗ್' ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. 'ಪ್ಲಾಗಿಂಗ್' ಎಂದರೆ, ಜಾಗಿಂಗ್ ಮಾಡುತ್ತ ಪ್ಲಾಸ್ಟಿಕ್ ಕಸವನ್ನು ಹೆಕ್ಕುವುದು.
ಸುಮಾರು 30 ನಿಮಿಷ ಸಮುದ್ರ ತೀರದಲ್ಲಿ ವಾಯುವಿಹಾರದ ಜತೆಗೆ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ಚೀಲದಲ್ಲಿ ಸಂಗ್ರಹಿಸುವುದನ್ನು ಪ್ರಧಾನಿ ಮೋದಿ ನಡೆಸಿದ್ದರು. ಅವರು ಕಸದ ಸಂಗ್ರಹದ ಚೀಲವನ್ನು ಹೊಟೇಲ್ ಸಿಬ್ಬಂದಿ ಜಯರಾಜ್ ಅವರಿಗೆ ಒಪ್ಪಿಸಿದ್ದಾಗಿ ಟ್ವೀಟಿಸಿದ್ದರು.
ತೀರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಮರಳಿನಲ್ಲಿ ಹುದುಗಿದ್ದ ಪ್ಲಾಸ್ಟಿಕ್ ಚೀಲಗಳು ಹಾಗೂ ಚಪ್ಪಲಿ ಎಳೆದು ತೆಗೆದು ದೊಡ್ಡ ಪ್ಲಾಸ್ಟಿಕ್ ಚೀಲದೊಳಗೆ ತುಂಬಿಕೊಳ್ಳುತ್ತ ನಡೆದಿದ್ದರು. ವಾಕಿಂಗ್ ಜತೆಗೆ ಕಸವನ್ನು ಸಂಗ್ರಹಿಸುತ್ತ ತುಂಬಿದ ಚೀಲವನ್ನು ಹೆಗಲ ಮೇಲೆ ಹೊತ್ತು ಹೊಟೇಲ್ ಸಿಬ್ಬಂದಿಗೆ ನೀಡಿದ್ದು ವಿಡಿಯೊದಲ್ಲಿ ದಾಖಲಾಗಿತ್ತು.
ಜಾಗಿಂಗ್ ಅಥವಾ ವಾಕಿಂಗ್ ಜೊತೆಗೆ ಕಸ ಹೆಕ್ಕುವ 'ಪ್ಲಾಗಿಂಗ್' ಚಟುವಟಿಕೆಯು ಸ್ವೀಡನ್‌ನಲ್ಲಿ 2016ರಲ್ಲಿ ಮೊದಲಿಗೆ ನಡೆದಿತ್ತು. ಅನಂತರ 2018ರ ವೇಳೆಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಚಟುವಟಿಕೆಯು ವಿಸ್ತರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.