ನವದೆಹಲಿ: ಕೋವಿಡ್–19 ಲಸಿಕೆಯು ವ್ಯರ್ಥವಾಗುದನ್ನು ತಪ್ಪಿಸಿದ ಕೇರಳದ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಸಿಕೆ ಸದ್ಬಳಕೆ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ, ಮಾದರಿ ನಡೆ ಎಂದು ಶ್ಲಾಘಿಸಿದ್ದಾರೆ.
‘ಕೇರಳಕ್ಕೆ ಕೇಂದ್ರ ಸರ್ಕಾರದಿಂದ 73,38,806 ಡೋಸ್ ಲಸಿಕೆಗಳು ಲಭ್ಯವಾಗಿವೆ. ಒಬ್ಬರಿಗೆ ನೀಡಿದ ಬಳಿಕ ಪ್ರತಿಯೊಂದು ಸೀಶೆಯಲ್ಲಿ ಉಳಿಯುವ, ವ್ಯರ್ಥವಾಗುವ ಲಸಿಕೆಯನ್ನೂ ಬಳಸಿಕೊಂಡು ನಾವು 74,26,164 ಡೋಸ್ ಲಸಿಕೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ನಮ್ಮ ಹೃತ್ಪೂರ್ವಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಮೋದಿ, ‘ಲಸಿಕೆ ಪೋಲು ತಪ್ಪಿಸುವ ಮೂಲಕ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಮಾದರಿಯಾಗಿದ್ದಾರೆ. ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸುವುದು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ’ ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.