ADVERTISEMENT

ಹುತಾತ್ಮರ ದಿನ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ರಾಷ್ಟ್ರಪತಿ ಮುರ್ಮು ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2023, 6:57 IST
Last Updated 30 ಜನವರಿ 2023, 6:57 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಮರ್ಪಿಸಿದ್ದಾರೆ.

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ವರ್ಷದ ಪುಣ್ಯತಿಥಿ. ಮಹಾತ್ಮ ಗಾಂಧಿ ಅವರನ್ನು 1948ರಲ್ಲಿ ಇದೇ ದಿನ ನಾಥೂರಾಂ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಹೀಗಾಗಿ ಈ ದಿನವನ್ನು 'ಹುತಾತ್ಮರ ದಿನ'ವೆಂದು ಆಚರಿಸಲಾಗುತ್ತದೆ.

ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಾಪು (ಮಹಾತ್ಮ ಗಾಂಧಿ) ಅವರ ಚಿಂತನೆಗಳನ್ನು ಸ್ಮರಿಸುತ್ತೇನೆ. ದೇಶ ಸೇವೆಯಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಅವು ಅಭಿವೃದ್ಧಿಗಾಗಿ ದುಡಿಯುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತವೆ ಎಂದಿದ್ದಾರೆ.

ADVERTISEMENT

ಸ್ವಾವಲಂಬಿ ಹಾಗೂ ಸ್ವದೇಶಿ ಮಾರ್ಗ ಅನುಸರಣೆ ಮೂಲಕ ಸ್ವಾವಲಂಬಿ ದೇಶ ನಿರ್ಮಾಣಕ್ಕೆ ಪ್ರೇರಣೆಯಾದ ಮಹಾತ್ಮ ಗಾಂಧಿ ಅವರಿಗೆ ಅವರ ಪುಣ್ಯಸ್ಮರಣೆಯಂದು ಕೋಟಿ ನಮಗಳನ್ನು ಸಲ್ಲಿಸುತ್ತೇನೆ. ಅವರ ಸ್ವಚ್ಛತೆ, ಸ್ವದೇಶಿ ಹಾಗೂ ಸ್ವ–ಭಾಷೆ (ಮಾತೃ ಭಾಷೆ) ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಾಪುವಿಗೆ ತೋರುವ ನಿಜವಾದ ಗೌರವವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ.

ಬಾಪು ಅವರ ಪುಣ್ಯತಿಥಿಯಂದು ವಿನಮ್ರ ಗೌರವಗಳನ್ನು ಸಲ್ಲಿಸುತ್ತೇನೆ. ವಿಶ್ವ ಶಾಂತಿ ಮತ್ತು ಭಾರತದ ಪ್ರಗತಿಗಾಗಿ ಅವರು ತೋರಿದ ಹಾದಿ ಇಂದಿಗೂ ಪ್ರಸ್ತುತ. ಅವರ ಪ್ರೇರಣೆಯಿಂದಾಗಿ ನವ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಬಾಪು ಇಡೀ ದೇಶ ಪ್ರೀತಿಯಿಂದ, ಸರ್ವಧರ್ಮಗಳು ಸಮಾನತೆಯಿಂದ ಬದುಕಲು ಹಾಗೂ ಸತ್ಯಕ್ಕಾಗಿ ಹೋರಾಟ ಮಾಡುವುದನ್ನು ಕಲಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಅವರು ಹುತಾತ್ಮರಾದ ದಿನದಂದು ಕೋಟಿ ನಮನಗಳು ಎಂದು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.