ನವದೆಹಲಿ: ಈ ಬಾರಿಯ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ್’ ಎಂದೇ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ವಿವಿಧ ದೇಶಗಳ ನಾಯಕರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದ ರಾಷ್ಟ್ರಪತಿ ಅವರ ಪತ್ರದಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ‘ಇಂಡಿಯಾ‘ವನ್ನು ಬದಲಿಸಿ ‘ಭಾರತ್‘ ಎಂಬ ಹೆಸರನ್ನು ಕೇಂದ್ರ ಸರ್ಕಾರ ಶಾಶ್ವತವಾಗಿ ಬಳಸಿಕೊಳ್ಳುವುದೇ? ಜಾಗತಿಕ ಮಟ್ಟದಲ್ಲಿ ‘ಇಂಡಿಯಾ‘ ಹೆಸರಿನಲ್ಲಿ ಸೃಷ್ಟಿಯಾಗಿರುವ ಬ್ರಾಂಡ್ ಮೌಲ್ಯವನ್ನು ಪ್ರಧಾನಿ ಮೋದಿ ಕಳೆದುಕೊಳ್ಳುವರೇ? ಎಂದು ವಿರೋಧ ಪಕ್ಷಗಳ ನಾಯಕರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದರು.
ಇದರ ಮುಂದುವರಿದ ಭಾಗವಾಗಿ ಶನಿವಾರದಿಂದ ಆರಂಭವಾದ ಜಿ20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಕೂತಿರುವ ಆಸನದ ಮುಂಭಾಗದ ಮೇಜಿನ ಮೇಲೆ ಅವರು ಪ್ರತಿನಿಧಿಸುವ ದೇಶದ ಹೆಸರಿನ ಜಾಗದಲ್ಲಿ ‘ಭಾರತ್’ ಎಂದು ನಮೂದಿಸಿರುವುದೂ ಈ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.
ಜಿ20 ಕುರಿತ ಕೈಪಿಡಿಯಲ್ಲೂ ‘ಭಾರತ್–ಪ್ರಜಾಪ್ರಭುತ್ವದ ತಾಯಿ’ ಎಂದೇ ಮುದ್ರಿಸಲಾಗಿದೆ. ಜತೆಗೆ ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಸಂವಿಧಾನದಲ್ಲಿ ಇದು ಉಲ್ಲೇಖಗೊಂಡಿದೆ. ಜತೆಗೆ 1946–48ರಲ್ಲಿ ಸಂಸತ್ ಕಲಾಪದಲ್ಲೂ ಇದು ಚರ್ಚೆಗೊಂಡಿದೆ’ ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ.
ಸೆ. 18ರಿಂದ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಲಿದೆಯೇ ಎಂಬ ಚರ್ಚೆಗಳೂ ನಡೆದಿವೆ. ದೇಶದ ಇತಿಹಾಸವನ್ನು ಅಳಿಸಿಹಾಕುವ ಯತ್ನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ವಿರೋಧ ಪಕ್ಷಗಳ ಟೀಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ವಿರೋಧ ಪಕ್ಷಗಳು ದೇಶ ವಿರೋಧಿ ಹಾಗೂ ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿವೆ’ ಎಂದು ಸಂವಿಧಾನದ ಒಂದನೇ ವಿಧಿಯನ್ನು ಉಲ್ಲೇಖಿಸಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ವಿಷಯ ಕುರಿತು ಮಾತನಾಡಿ, ‘ವಸಹಾತುಶಾಹಿ ಮನಸ್ಥಿತಿಗೆ ’ಭಾರತ್’ ಎಂಬುದು ದೊಡ್ಡ ಉತ್ತರವಾಗಿದೆ. ಇದು ಮೊದಲೇ ಆಗಿದ್ದರೆ ನನಗೆ ದೊಡ್ಡ ಸಮಾಧಾನ ನೀಡುತ್ತಿತ್ತು. ಭಾರತ್ ಎಂಬುದೇ ನಮ್ಮ ಪರಿಚಯ. ನಮಗೆ ಅದರ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.