ನವದೆಹಲಿ: ‘ಯುವ ಸಮುದಾಯ ಸುಲಭವಾಗಿ ಉದ್ದಿಮೆ ನಡೆಸುವಂತಹ ಅವಕಾಶ ಕಲ್ಪಿಸಲು ಭಾರತ ಬದ್ಧವಾಗಿದೆ. ಅದೇ ರೀತಿ ಯುವ ಜನರು ತಮ್ಮಲ್ಲಿರುವ ಅದ್ಭುತ ಜ್ಞಾನ,ಅಗಾಧ ಅನುಭವ ಮತ್ತು ನವೀನ ಸಂಶೋಧನೆಗಳ ಮೂಲಕ ದೇಶದಲ್ಲಿರುವ ಕೋಟ್ಯಂತರ ಬಡವರ ಬದಕಿನಲ್ಲಿ ಬದಲಾವಣೆ ತರುವ ಕೆಲಸಗಳನ್ನು ಮಾಡಬೇಕು‘ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
ಶನಿವಾರ ದೆಹಲಿ ಐಐಟಿಯ 51ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು,‘ಕೋವಿಡ್ 19, ಜಗತ್ತಿಗೇ ಜಾಗತೀಕರಣದ ಜತೆಗೆ ಸ್ವಾವಲಂಬನೆಯೂ ಮುಖ್ಯ ಎಂಬುದನ್ನು ಹೇಳಿಕೊಟ್ಟಿದೆ. ಕೊರೊನೋತ್ತರ ಜಗತ್ತಿನಲ್ಲಿ ತಂತ್ರಜ್ಞಾನಗಳು ಪ್ರಮುಖ ಪಾತ್ರವಹಿಸುತ್ತವೆ‘ ಎಂದು ಅವರು ಅಭಿಪ್ರಾಯಪಟ್ಟರು.
‘ಪದವೀಧರ ವಿದ್ಯಾರ್ಥಿಗಳು ಗುಣಮಟ್ಟದ ಕೆಲಸದತ್ತ ಗಮನಹರಿಸಬೇಕು. ರಾಜಿ ಮಾಡಿಕೊಳ್ಳದೇ ಬೃಹತ್ ಪ್ರಮಾಣದಲ್ಲಿ ಆವಿಷ್ಕಾರಗಳನ್ನು ಮಾಡಿ‘ ಎಂದರು.
‘ನಿಮ್ಮ ಕೆಲಸವು ನಮ್ಮ ದೇಶದ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡುತ್ತದೆ. ನಿಮ್ಮ ಪ್ರಯತ್ನಗಳು ಭಾರತೀಯ ಉತ್ಪನ್ನಗಳ ತ್ವರಿತ ಮಾನ್ಯತೆಗೆ ಕಾರಣವಾಗುತ್ತವೆ‘ ಎಂದು ಹೇಳಿದ ಮೋದಿಯವರು, ವಿದ್ಯಾರ್ಥಿಗಳನ್ನು ಬ್ರಾಂಡ್ ಇಂಡಿಯಾದ ಅತ್ಯುತ್ತಮ ರಾಯಭಾರಿಗಳು ಎಂದು ಕರೆದರು.
‘ಕಳೆದ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಉತ್ತಮ ಆಡಳಿತ ನಡೆಸಲು ನೆರವಾಗಿದೆ ಮತ್ತು ಬಡವರಿಗೆ, ನಿರ್ಗತಿಕರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದೆ ಎಂಬುದನ್ನು ನಮ್ಮ ದೇಶ ಕಂಡಿದೆ‘ ಎಂದು ಅವರು ಹೇಳಿದರು.
‘ತಂತ್ರಜ್ಞಾನವು ಭ್ರಷ್ಟಾಚಾರ ಪ್ರಮಾಣವನ್ನು ಕಡಿಮೆಗೊಳಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ನೆರವಾಗಿದೆ‘ ಎಂದು ಮೋದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.