ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಜ್ ಟ್ರಸ್ ಅವರನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಲಿಜ್ ಟ್ರಸ್ ಅವರು ಬ್ರಿಟನ್ ವಿದೇಶಾಂಗ ಸಚಿವೆಯಾಗಿದ್ದ ಸಂದರ್ಭದಲ್ಲಿ ಭಾರತ-ಯುಕೆ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಅವರು ನೀಡಿದ್ದ ಕೊಡುಗೆಗಳನ್ನು ಮೋದಿ ಶ್ಲಾಘಿಸಿದ್ದಾರೆ.
ಭಾರತ- ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸೋಣ ಎಂದು ಮೋದಿ ಹೇಳಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ಉಭಯ ನಾಯಕರು ರಕ್ಷಣಾ ಕ್ಷೇತ್ರ ಮತ್ತು ಭದ್ರತಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಹಿತಾಸಕ್ತಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಭಾರತದ ಜನತೆಯ ಪರವಾಗಿ ಪ್ರಧಾನಿ ಮೋದಿ, ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಲಿಜ್ ಟ್ರಸ್ ಅವರು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದು, ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ಅವರ ನಂತರ ದೇಶ ಮುನ್ನಡೆಸುವ ಮೂರನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಹಗರಣ ಮತ್ತು ಸಂಪುಟ ಸದಸ್ಯರ ಅವಿಶ್ವಾಸದಿಂದ ಅಧಿಕಾರ ಕಳೆದುಕೊಂಡಿರುವ ಬೋರಿಸ್ ಜಾನ್ಸನ್ ಅವರ ನಂತರ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರು ಆಗಲಿದ್ದಾರೆಂಬ ಹಲವು ತಿಂಗಳುಗಳ ಕುತೂಹಲಕ್ಕೆ ಸೋಮವಾರ (ಸೆ.6) ತೆರೆ ಬಿದ್ದಿತು.
ಬ್ರಿಟನ್ ಟೋರಿ ನಾಯಕತ್ವ ಚುನಾವಣಾ ಅಖಾಡದಲ್ಲಿ 47ರ ಹರೆಯದ ಲಿಜ್ ಟ್ರಸ್ ಅವರಿಗೆ ನಿರೀಕ್ಷಿತ ಗೆಲುವು ಸಿಕ್ಕಿದೆ. ಬೋರಿಸ್ ಜಾನ್ಸನ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಸುಮಾರು 21 ಸಾವಿರ ಮತಗಳ ಅಂತರದಿಂದ ಮಣಿಸಿ, ಟೋರಿ ನಾಯಕಿ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2015ರ ಚುನಾವಣೆ ನಂತರ ಕನ್ಸರ್ವೇಟಿವ್ ಪಕ್ಷದಿಂದ ಆಯ್ಕೆಯಾದ ನಾಲ್ಕನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಟ್ರಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.