ADVERTISEMENT

ಎಲ್ಲ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್‌; ವಿಶ್ವಕ್ಕಾಗಿ ಉತ್ಪಾದಿಸಿ: ಮೋದಿ ಹೊಸ ಮಂತ್ರ

ನೂರು ಲಕ್ಷ ಕೋಟಿ ವೆಚ್ಚದ ಮೂಲಸೌಕರ್ಯ ಯೋಜನೆ ಘೋಷಿಸಿದ ಪ್ರಧಾನಿ

ಪಿಟಿಐ
Published 15 ಆಗಸ್ಟ್ 2020, 21:44 IST
Last Updated 15 ಆಗಸ್ಟ್ 2020, 21:44 IST
   

ನವದೆಹಲಿ: ‘ಆತ್ಮನಿರ್ಭರ ಭಾರತ’ದ ಸಂಕಲ್ಪವನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಂದಾಜು ₹110 ಲಕ್ಷ ಕೋಟಿ ವೆಚ್ಚದ ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು.

ಕೆಂಪುಕೋಟೆಯ ಮೇಲೆ ಧ್ವಜಾರೋಹಣದ ನಂತರ ಮಾತನಾಡಿದ ಅವರು, ಇದಕ್ಕಾಗಿ ವಿವಿಧ ವಲಯಗಳಲ್ಲಿ 7,000 ಯೋಜನೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ಸಾವಿರ ದಿನಗಳಲ್ಲಿ ದೇಶದ ಆರು ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್‌ ಫೈಬರ್‌ ಸಂಪರ್ಕ ಕಲ್ಪಿಸಲಾಗುವುದು. ಲಕ್ಷದ್ವೀಪಕ್ಕೆ ಸಬ್‌ಮರೀನ್ ಹೈಸ್ಪೀಡ್‌ ಆಪ್ಟಿಕಲ್‌ ಫೈಬರ್ ಸಂಪರ್ಕ ಕಲ್ಪಿಸಲಾಗುವುದು ಎಂದು ಘೋಷಿಸಿದರು.

ADVERTISEMENT

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು, ದೇಶದ 60 ಗ್ರಾಮಗಳಲ್ಲಿ ಮಾತ್ರ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಭಾರತ ನೆಟ್‌ ಪ್ರಾಜೆಕ್ಟ್ ಅಡಿ ಐದು ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಸರಳವಾಗಿ ನಡೆದ ಸ್ವಾತಂತ್ರ್ಯ ದಿನಾಚರಣೆ: ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಂಡಿರುವ ಸಭಿಕರ ನಡುವೆ ಎದ್ದುಕಾಣುವ ಉತ್ಸಾಹಿ ಶಾಲಾ ಮಕ್ಕಳ ಗೈರು, ಬೆರಳೆಣಿಕೆಯ ಗಣ್ಯರು. ಇದು ದೆಹಲಿಯ ಕೆಂಪುಕೋಟೆಯಲ್ಲಿ ಶನಿವಾರ ಕಂಡುಬಂದ ದೃಶ್ಯ.

ಪ್ರತಿ ವರ್ಷ ಆಗಸ್ಟ್‌ 15ರಂದು ಬೆಳಗ್ಗೆ ಸಾವಿರಾರು ಜನರು, ಮಕ್ಕಳಿಂದ ಗಿಜಿಗುಡುತ್ತಿದ್ದ ಕೆಂಪು ಕೋಟೆಯ ಚಿತ್ರಣ ಈ ವರ್ಷ ಸಂಪೂರ್ಣ ಭಿನ್ನವಾಗಿತ್ತು.ಕೋವಿಡ್‌–19 ಪಿಡುಗಿನ ಕಾರಣದಿಂದ ಈ ಬಾರಿ ಕೇವಲ 4 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.

ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಮುಖಗವಸು ಧರಿಸಿ, ಪರಸ್ಪರ ಆರು ಅಡಿ ಅಂತರದಲ್ಲಿ ಕುಳಿತಿದ್ದರು. ಪ್ರತಿ ಕುರ್ಚಿಯಲ್ಲೂ ಮುಖಗವಸು, ಸ್ಯಾನಿಟೈಸರ್‌, ಕೈಗವಸು ಇದ್ದ ಕಿಟ್‌ ಅನ್ನು ಇಡಲಾಗಿತ್ತು. ಎಂದಿಗಿಂತ ಕಡಿಮೆಯೇ ಗಣ್ಯರ ಪಟ್ಟಿ ಸಿದ್ಧಪಡಿಸಲಾಗಿತ್ತು. ಪಿಡುಗಿನ ಕಾರಣದಿಂದಾಗಿ ಆಹ್ವಾನಿಸಿದ್ದ ಗಣ್ಯರಲ್ಲೂ ಕೆಲವರು ಗೈರಾಗಿದ್ದರು.

ಪ್ರವೇಶ ದ್ವಾರದಲ್ಲೇ ಪಿಪಿಇ ಕಿಟ್‌ ಧರಿಸಿದ್ದ ಭದ್ರತಾ ಸಿಬ್ಬಂದಿಗಳು ಗಣ್ಯರ ದೇಹದ ಉಷ್ಣಾಂಶವನ್ನು ಸ್ಕ್ಯಾನರ್‌ ಮುಖಾಂತರ ಪರಿಶೀಲಿಸಿ ಒಳಬಿಟ್ಟರು. ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಬಣ್ಣದ ದಿರಿಸು ಧರಿಸಿ ಬರುತ್ತಿದ್ದರು. ಆದರೆ ಈ ಬಾರಿ ಶಾಲಾ ವಿದ್ಯಾರ್ಥಿಗಳ ಬದಲಾಗಿ ಕೇವಲ 500 ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದರು. ಇದನ್ನು ತಮ್ಮ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.

5 ಕೋಟಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌
ಮಹಿಳೆಯರ ಆರೋಗ್ಯ, ಮದುವೆ ವಯಸ್ಸು ಮತ್ತು ಋತುಚಕ್ರ ಅವಧಿಯಲ್ಲಿ ಪಾಲಿಸಬೇಕಾದ ನೈರ್ಮಲ್ಯ ಕ್ರಮಗಳ ಕುರಿತು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಜನೌಷಧಿ ಕೇಂದ್ರಗಳ ಮೂಲಕ ದೇಶದ ಐದು ಕೋಟಿ ಬಡ ಮಹಿಳೆಯರಿಗೆ ಕೇವಲ ಒಂದು ರೂಪಾಯಿ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ‌ವಿತರಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರ ಮದುವೆಯ ಕನಿಷ್ಠ ವಯೋಮಿತಿ ಮರುಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯು ವರದಿ ಸಲ್ಲಿಸಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮೋದಿ ಭಾಷಣದಲ್ಲಿ ಕೇಳಿ ಬಂದಿದ್ದು...

*ನೂರು ನಗರಗಳಲ್ಲಿ ಮಾಲಿನ್ಯ ಪ್ರಮಾಣ ತಗ್ಗಿಸಲು ವಿಶೇಷ ಅಭಿಯಾನ

* ಏಷ್ಯಾದ ಸಿಂಹ ಮತ್ತು ಡಾಲ್ಫಿನ್‌ಗಳ ಸಂರಕ್ಷಣೆಗೆ ಹೊಸದಾಗಿ ಯೋಜನೆಗಳು

* ಕೇಂದ್ರಾಡಳಿತ ಪ್ರದೇಶವಾದ ನಂತರಜಮ್ಮ ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಯುಗ ಆರಂಭ

*ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ಪ್ರಗತಿಯಲ್ಲಿದ್ದು, ಮುಗಿದ ಕೂಡಲೇ ವಿಧಾನಸಭಾ ಚುನಾವಣೆ ಮೂಲಕ ಜನಪ್ರತಿನಿಧಿಗಳ ಆಯ್ಕೆ. ಹೊಸ ಸರ್ಕಾರ ರಚನೆ

* ದೇಶದ ನೀತಿಗಳು, ಕಾರ್ಯವೈಖರಿ ಮತ್ತು ತಯಾರಿಸುವ ಗುಣಮಟ್ಟದ ಉತ್ಪನ್ನಗಳಿಂದ ಮಾತ್ರ ‘ಶ್ರೇಷ್ಠ ಭಾರತ’ ಕಲ್ಪನೆ ನನಸಾಗಲು ಸಾಧ್ಯ

*ಕೋವಿಡ್‌–19 ಪಿಡುಗಿನ ವೇಳೆ ಎಲ್ಲರಿಗೂ ತಂತ್ರಜ್ಞಾನದ ಮಹತ್ವ ಅರಿವಾಗತೊಡಗಿದೆ

* ಕಳೆದ ಮೂರು ತಿಂಗಳಲ್ಲಿ ಭಿಮ್‌ ಯುಪಿಐ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಮೂಲಕ ಅಂದಾಜು ಮೂರು ಲಕ್ಷ ಕೋಟಿ ಮೊತ್ತದ ವಹಿವಾಟು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.