ಗುವಾಹಟಿ: ಪ್ರಸ್ತುತ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಟೀ ಎಸ್ಟೇಟ್‌ನಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ಟೀ ಎಸ್ಟೇಟ್‌ಗೆ ಭೇಟಿ ನೀಡಿರುವ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೆ ಟೀ ಎಸ್ಟೇಟ್‌ಗಳಿಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.
‘ಅಸ್ಸಾಂ ತನ್ನ ಭವ್ಯವಾದ ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ. ಅಸ್ಸಾಂ ಚಹಾವು ಪ್ರಪಂಚದಾದ್ಯಂತ ತನ್ನದೇ ಆದ ಸ್ವಾದವನ್ನು ಹೊಂದಿದೆ. ಚಹಾ ತೋಟಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿರುವವರು ಮತ್ತು ಪ್ರಪಂಚದಾದ್ಯಂತ ಅಸ್ಸಾಂನ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿರುವ ಚಹಾ ತೋಟದ ಸಮುದಾಯವನ್ನು ಶ್ಲಾಘಿಸುತ್ತೇನೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಸ್ಸಾಂನ ಚಹಾ ಸಮುದಾಯವು ಹತ್ತಾರು ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಅಸ್ಸಾಂಗೆ ಭೇಟಿ ನೀಡಿರುವುದರಿಂದ ರಾಜಕೀಯ ಲೆಕ್ಕಾಚಾರವೂ ಜೋರಾಗಿದೆ.
ಅಸ್ಸಾಂನಲ್ಲಿ ವಾರ್ಷಿಕ ಸುಮಾರು 700 ಮಿಲಿಯನ್ ಕೆ.ಜಿ ಚಹಾವನ್ನು ಉತ್ಪಾದಿಸಲಾಗುತ್ತದೆ. ಇದು ಭಾರತದ ಒಟ್ಟಾರೆ ಚಹಾ ಉತ್ಪಾದನೆಯ ಅರ್ಧದಷ್ಟು ಭಾಗವನ್ನು ಒಳಗೊಂಡಿದೆ. ರಾಜ್ಯವು ವಾರ್ಷಿಕ ₹3,000 ಕೋಟಿಗೆ ಸಮಾನದ ವಿದೇಶಿ ವಿನಿಮಯ ಗಳಿಕೆಯನ್ನು ಹೊಂದಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.