ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಯೋಜನೆ ಜಾರಿಯಲ್ಲಿದ್ದರೂ ದೇಶದ ಆರ್ಥಿಕ ಸ್ಥಿತಿಗತಿ, ರಪ್ತು, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಕುರಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವ್ಯಾಪಾರದಲ್ಲಿ ಚೀನಾವನ್ನು ಅತಿ ದೊಡ್ಡ ಪಾಲುದಾರನನ್ನಾಗಿ ಮಾಡಿಕೊಳ್ಳುವ ಮೂಲಕ ನಕಲಿ ರಾಷ್ಟ್ರೀಯತೆಯನ್ನು ಅನುಸರಿಸುತ್ತಿದ್ದಾರೆ ಎಂದು ಸೋಮವಾರ ಆರೋಪಿಸಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೋದಿ ಅವರೇ, ಮಂಗಳಸೂತ್ರ, ಮಟನ್, ಮಚ್ಚಲಿ, ಮುಜ್ರಾ ಬಗ್ಗೆ ಮಾತನಾಡುತ್ತೀರಿ. ಆದರೆ, ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವುದಿಲ್ಲ, ಏಕೆ? ಆರ್ಥಿಕತೆಯ ಬಗ್ಗೆ ಒಂದೇ ಒಂದು ಪದವನ್ನೂ ಮಾತನಾಡುವುದಿಲ್ಲ, ಏಕೆ? ಅದಕ್ಕೆ ಉತ್ತರ ಅವರ ಸರ್ಕಾರದ ದಯನೀಯ ಸೋಲಿನಲ್ಲಿದೆ’ ಎಂದು ಹೇಳಿದರು.
‘ಮೇಕ್ ಇನ್ ಇಂಡಿಯಾ ವಿಫಲವಾಗಿದೆ, ಉತ್ಪನ್ನ ಆಧಾರಿತ ಉತ್ತೇಜನ ಯೋಜನೆ (ಪಿಎಲ್‌ಐ) ತೆವಳುತ್ತಿದೆ ಮತ್ತು ರಫ್ತು ಕುಸಿದಿದೆ’ ಎಂದು ಆರೋಪಿಸಿದರು
‘56 ಇಂಚಿನ ಎದೆ ಎಂದು ಹೇಳಿಕೊಳ್ಳುವುದು ಮತ್ತು ಆ್ಯಪ್ ನಿಷೇಧ, ನಕಲಿ ರಾಷ್ಟ್ರೀಯತೆಯ ನಡುವೆಯೂ ಮೋದಿಯವರು ಚೀನಾವನ್ನು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಗಾಲ್ವನ್ ಕಣಿವೆಯಲ್ಲಿ ನಮ್ಮ ಯೋಧರ ತ್ಯಾಗದ ನಂತರವೂ ಚೀನಾವನ್ನು ಮೋದಿ ಆರೋಪಮುಕ್ತಗೊಳಿಸಿದರು. ಅದಕ್ಕೆ ಉಚಿತ ಕೊಡುಗೆಯಾಗಿ ಭಾರತಕ್ಕೆ ಸಿಕ್ಕಿದ್ದು, ಚೀನಾದಿಂದ ಆಮದಿನ ಹೆಚ್ಚಳ. ಜೂನ್ 2020 ಮತ್ತು ಜುಲೈ 2020ರ ನಡುವೆ ಚೀನಾದಿಂದ ಭಾರತಕ್ಕೆ ಆಮದಾದ ವಸ್ತುಗಳ ಮೌಲ್ಯ ಶೇ 68ರಷ್ಟು ಹೆಚ್ಚಳವಾಗಿತ್ತು’ ಎಂದು ವಿವರಿಸಿದರು.
ಕಳೆದ ವರ್ಷ ಭಾರತವು ರಫ್ತು ಮಾಡಿದ್ದಕ್ಕಿಂತ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಮೌಲ್ಯವು ₹7 ಲಕ್ಷ ಕೋಟಿ ಹೆಚ್ಚು ಎಂದರು.
ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆ ಉಲ್ಲೇಖಿಸಿರುವ ಖರ್ಗೆ ಅವರು, ಮೋದಿಯವರ ಆಡಳಿತದಲ್ಲಿ ಭಾರತವು 2023–34ರಲ್ಲಿ ಚೀನಾ, ರಷ್ಯಾ, ಸಿಂಗಪೂರ ಮತ್ತು ಕೊರಿಯಾ ಸೇರಿದಂತೆ 10 ವ್ಯಾಪಾರ ಪಾಲುದಾರ ದೇಶಗಳ ಪೈಕಿ 9ರಲ್ಲಿ ವ್ಯಾಪಾರ ಕೊರತೆಯನ್ನು ದಾಖಲಿಸಿದೆ’ ಎಂದಿದ್ದಾರೆ.
ಮೋದಿ ಅವಧಿಯಲ್ಲಿ ಭಾರತದ ವ್ಯಾಪಾರ ಕೊರತೆಯು ಶೇ 194.19ರಷ್ಟು ಹೆಚ್ಚಾಗಿದೆ ಎಂದ ಖರ್ಗೆ ಅವರು, ‘ಯುಪಿಎ ಅವಧಿಯಲ್ಲಿ ವ್ಯಾಪಾರ ಕೊರತೆಯು ₹8.1 ಲಕ್ಷ ಕೋಟಿ ಇದ್ದರೆ, ಎನ್‌ಡಿಎ ಅವಧಿಯಲ್ಲಿ (2023–24ರಲ್ಲಿ) ₹23.83 ಲಕ್ಷ ಕೋಟಿ ಆಗಿದೆ’ ಎಂದರು.
‘ಮೋದಿ ತಾವು ಜೈವಿಕವಾಗಿ ಜನಿಸಿದವರಲ್ಲ ಎಂದು ಹೇಳಿಕೊಂಡಿದ್ದಾರೆ. ಈಗ ಜನ ತಾರ್ಕಿಕವಾಗಿ ಮಾಡಬೇಕಿರುವುದೇನೆಂದರೆ, ಬಿಜೆಪಿಯನ್ನು ಸೋಲಿಸಿ ‘ಇಂಡಿಯಾ’ವನ್ನು ಗೆಲ್ಲಿಸುವುದು’ ಎಂದು ಹೇಳಿದರು.
‘ನಷ್ಟದ ಹೊರೆ ಬಡವರ ಮೇಲೆ’
ರೈಲ್ವೆ ಇಲಾಖೆಯ ನಷ್ಟದ ಭಾರವನ್ನು ಬಡ ಪ್ರಯಾಣಿಕರು ಹೊರಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
‘ಮೋದಿ ಅವರ ಒಂದು ದಶಕದ ಆಡಳಿತದಲ್ಲಿ ಭಾರತದ ಜನರ ಪ್ರಮುಖ ಸಾರಿಗೆಯಾದ ರೈಲುಗಳ ಬಗ್ಗೆ ಅವರ ಸರ್ಕಾರ ವಿಶೇಷ ಗಮನ ಹರಿಸಿದೆ. ಆದರೆ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಪ್ರಯಾಣವು ಹೆಚ್ಚು ದುಬಾರಿಯಾಗಿವೆ. ಬಡವರು ಸಂಚರಿಸುವ ರೈಲುಗಳಲ್ಲಿ ಆಸನಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ದಟ್ಟಣೆ ಹೆಚ್ಚಾಗಿದೆ. ರೈಲುಗಳ ವೇಗ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದಷ್ಟೇ ಇದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.