ADVERTISEMENT

ಕಾರ್ಗಿಲ್‌ ವಿಜಯ ದಿವಸ | ಅಗ್ನಿಪಥವೂ ಸೇನೆಯದ್ದೇ ಯೋಜನೆ: ಪ್ರಧಾನಿ ನರೇಂದ್ರ ಮೋದಿ

ವಿರೋಧ ಪಕ್ಷಗಳ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 26 ಜುಲೈ 2024, 23:30 IST
Last Updated 26 ಜುಲೈ 2024, 23:30 IST
<div class="paragraphs"><p>ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ರಾಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶುಕ್ರವಾರ ಗೌರವ ಸಲ್ಲಿಸಿದರು.</p></div>

ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ರಾಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶುಕ್ರವಾರ ಗೌರವ ಸಲ್ಲಿಸಿದರು.

   

ಪಿಟಿಐ ಚಿತ್ರ

ದ್ರಾಸ್‌ (ಕಾರ್ಗಿಲ್): ’ತನ್ನ ಯುದ್ಧ ಸಾಮರ್ಥ್ಯ ವೃದ್ಧಿಗಾಗಿ ಭಾರತೀಯ ಸೇನೆಯೇ ಕೈಗೊಂಡ ಅಗತ್ಯ ಸುಧಾರಣೆಗಳಿಗೆ ಅಗ್ನಿಪಥ ಯೋಜನೆ ಒಂದು ನಿದರ್ಶನ. ಆದರೆ, ರಾಷ್ಟ್ರೀಯ ಭದ್ರತೆಯಂತಹ ಸೂಕ್ಷ್ಮ ವಿಚಾರವಾಗಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ADVERTISEMENT

ಕಾರ್ಗಿಲ್‌ ವಿಜಯ ದಿವಸದ 25ನೇ ವರ್ಷಾಚರಣೆ ಅಂಗವಾಗಿ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭದ್ರತಾ ಪಡೆಗಳು ತಾರುಣ್ಯದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಸರಾಸರಿ ವಯೋಮಿತಿ ನಿಗದಿ ಮಾಡಲಾಗಿದೆ. ವಿರೋಧ ಪಕ್ಷಗಳು ನೇಮಕಾತಿ ಪ್ರಕ್ರಿಯೆ ವಿಚಾರವಾಗಿ ರಾಜಕೀಯ ಮಾಡುತ್ತಿವೆ’ ಎಂದು ಟೀಕಿಸಿದರು.

ಪಿಂಚಣಿಗೆ ನೀಡಬೇಕಾದ ಹಣ ಉಳಿಸಲು ಅಗ್ನಿಪಥ ಯೋಜನೆ ಆರಂಭಿಸಲಾಗಿದೆ ಎಂಬ ವಿಪಕ್ಷಗಳ ಹೇಳಿಕೆಗಳನ್ನು ಮೋದಿ ತಳ್ಳಿ ಹಾಕಿದರು.

‘ರಾಷ್ಟ್ರೀಯ ಭದ್ರತೆಯಂತಹ ಸೂಕ್ಷ್ಮ ವಿಚಾರವನ್ನು ಕೆಲವರು ರಾಜಕೀಯ ವಿಷಯ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಹುಸಿ ರಾಜಕೀಯ ಮಾಡುತ್ತಿದ್ದಾರೆ’ ಎಂದರು.

‘ಸಶಸ್ತ್ರ ಪಡೆಗಳಿಗೆ ತಾರುಣ್ಯ ತುಂಬಬೇಕು ಎಂಬ ಕುರಿತು ಸಂಸತ್‌ನಲ್ಲಿ ದಶಕಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಈ ಕುರಿತು ಅಧ್ಯಯನ ಕೈಗೊಳ್ಳಲು ಹಲವಾರು ಸಮಿತಿಗಳನ್ನು ರಚಿಸಲಾಗಿತ್ತು. ಜಾಗತಿಕ ಸರಾಸರಿ ವಯಸ್ಸಿಗಿಂತ ಭಾರತೀಯ ಯೋಧರ ಸರಾಸರಿ ವಯಸ್ಸು ಹೆಚ್ಚು ಇದ್ದ ಬಗ್ಗೆ ಕಳವಳ ವ್ಯಕ್ತವಾಗಿತ್ತು’ ಎಂದರು.

‘ಹಲವಾರು ಸಮಿತಿಗಳು ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದವು. ರಾಷ್ಟ್ರೀಯ ಭದ್ರತೆಗೆ ಒದಗಿದ್ದ ಈ ಸವಾಲನ್ನು ಬಗೆಹರಿಸಲು ಈ ಹಿಂದೆ ಗಂಭೀರ ಪ್ರಯತ್ನಗಳು ನಡೆದಿರಲಿಲ್ಲ. ಈಗ, ಅಗ್ನಿಪಥ ಯೋಜನೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣಗಳನ್ನು ಮಾಡುವ ಮೂಲಕ ನಮ್ಮ ಭದ್ರತಾ ಪಡೆಗಳನ್ನು ದುರ್ಬಲಗೊಳಿಸಿದವರೇ ಈಗ ಅಗ್ನಿಪಥ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ವಾಯುಪಡೆ ಬತ್ತಳಿಕೆಗೆ ಆಧುನಿಕ ಯುದ್ಧವಿಮಾನಗಳ ಸೇರ್ಪಡೆ ಇವರಿಗೆ ಬೇಕಿರಲಿಲ್ಲ. ತೇಜಸ್‌ ಯುದ್ಧವಿಮಾನವನ್ನು ಮುಚ್ಚಿಡಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿತ್ತು’ ಎಂದು ಮೋದಿ ವಾಗ್ದಾಳಿ ನಡೆಸಿದರು.

1999ರಲ್ಲಿ ಶಾಂತಿ ಸ್ಥಾಪಿಸಲು ಭಾರತ ಯತ್ನಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ವಿಶ್ವಾಸಘಾತುಕ ಮುಖ ತೋರಿಸಿತು.
–ನರೇಂದ್ರ ಮೋದಿ, ಪ್ರಧಾನಿ

‘ಇತಿಹಾಸದಿಂದ ಪಾಕ್‌ ಪಾಠ ಕಲಿತಿಲ್ಲ’

ಶ್ರೀನಗರ: ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿತಿಲ್ಲ. ಭಯೋತ್ಪಾದನೆ ಮತ್ತು ಪರೋಕ್ಷ ಯುದ್ಧದ ಮೂಲಕ ಅದು ಪ್ರಸ್ತುತವಾಗಲು ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. ‘ಭಯೋತ್ಪಾದಕ ಚಟುವಟಿಕೆಗಳನ್ನು ಹೊಸಕಿ ಹಾಕಲು ಭಾರತೀಯ ಸೇನೆ ತನ್ನ ಸಂಪೂರ್ಣ ಸಾಮರ್ಥ್ಯ ಬಳಸಲಿದ್ದು ದೇಶದ ಶತ್ರುಗಳಿಗೆ ತಕ್ಕ ಉತ್ತರ ನೀಡಲಿದೆ’ ಎನ್ನುವ ಮೂಲಕ ಅವರು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು.

ಕಾರ್ಗಿಲ್‌ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಯೋತ್ಪಾದನೆ ನಿಯಂತ್ರಕರು ನನ್ನ ಮಾತುಗಳನ್ನು ನೇರವಾಗಿ ಕೇಳಿಸಿಕೊಳ್ಳಲು ಸಾಧ್ಯವಿರುವ ಸ್ಥಳದಿಂದ ನಾನು ಮಾತನಾಡುತ್ತಿರುವೆ. ಅವರ ದುಷ್ಟತನದ ಉದ್ದೇಶಗಳು ಈಡೇರಿವುದಿಲ್ಲ ಎಂದು ಅವರಿಗೆ ಹೇಳಬಯಸುವೆ’ ಎಂದರು.

‘ಲಡಾಖ್‌ ಅಥವಾ ಜಮ್ಮು–ಕಾಶ್ಮೀರವೇ ಇರಲಿ ಅಭಿವೃದ್ಧಿ ಕಾರ್ಯಗಳಿಗೆ ಎದುರಾಗುವ ಪ್ರತಿಯೊಂದು ಸವಾಲನ್ನು ಭಾರತ ಮೆಟ್ಟಿ ನಿಲ್ಲಲಿದೆ’ ಎಂದೂ ಹೇಳಿದರು.

ಚಾಲನೆ: ಶಿಂಕುನ್‌ ಲಾ ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ ಪ್ರಧಾನಿ ಮೋದಿ ಅವರು ಇದೇ ವೇಳೆ ವರ್ಚುವಲ್‌ ಆಗಿ ಚಾಲನೆ ನೀಡಿದರು. 4.1 ಕಿ.ಮೀ. ಉದ್ದದ ಜೋಡು ಮಾರ್ಗದ ಈ ಸುರಂಗವನ್ನು 15800 ಅಡಿ ಎತ್ತರದಲ್ಲಿ ನಿಮು–ಪದಮ್–ದರ್ಚಾ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದೆ. ಈ ಸುರಂಗ ಮಾರ್ಗವು ಲೇಹ್‌ಗೆ ಸರ್ವ ಋತುವಿನಲ್ಲಿಯೂ ಸಂಪರ್ಕ ಒದಗಿಸಲಿದೆ.

ಮೋದಿ ಅವರ ಹೇಳಿಕೆ ಶುದ್ಧ ಸುಳ್ಳು: ಖರ್ಗೆ

ನವದೆಹಲಿ: ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಾತ್ಮಕ ಅಗ್ನಿಪಥ ಯೋಜನೆ ಪ್ರಸ್ತಾಪಿಸಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಶುಕ್ರವಾರ ಟೀಕಿಸಿವೆ.

ಕಾರ್ಗಿಲ್‌ ವಿಜಯ ದಿವಸ ಅಂಗವಾಗಿ ಕಾರ್ಗಿಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ‘ಅಗ್ನಿಪಥ ಯೋಜನೆಯು ಸೇನೆಯೇ ರೂಪಿಸಿದ್ದು’ ಎಂಬ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

‘ಅಗ್ನಿಪಥ ಯೋಜನೆ ಕುರಿತಾಗಿ ಮೋದಿ ಅವರ ಹೇಳಿಕೆ ಶುದ್ಧ ಸುಳ್ಳು ಹಾಗೂ ಭದ್ರತಾ ಪಡೆಗಳಿಗೆ ಮಾಡಿರುವ ಘೋರ ಅವಮಾನ. ಈ ಯೋಜನೆ ಕುರಿತು ಮೋದಿ ಅವರು ಸುಳ್ಳುಗಳು ಹಾಗೂ ಗೊಂದಲ ಹಬ್ಬಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಪ್ರತಿಪಕ್ಷಗಳ ನಾಯಕರ ವಾದ
ಕಾರ್ಗಿಲ್‌ ವಿಜಯ ದಿವಸ ಸಂದರ್ಭದಲ್ಲಿಯೂ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅಗ್ನಿಪಥ ಯೋಜನೆ ಜಾರಿಯು ಮೂರು ಪಡೆಗಳಿಗೆ ಅಚ್ಚರಿ ತಂದಿತ್ತು ಎಂಬುದಾಗಿ ಆಗಿನ ಸೇನೆ ಮುಖ್ಯಸ್ಥ ಎಂ.ಎಂ.ನರವಣೆ ಪತ್ರ ಬರೆದಿದ್ದರು.
–ಜೈರಾಮ್‌ ರಮೇಶ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಅಗ್ನಿವೀರರಿಗೆ ಯಾವುದೇ ಸಾಮಾಜಿಕ ಭದ್ರತೆ ಒದಗಿಸದ ಕಾರಣ ಅಗ್ನಿಪಥ ಯೋಜನೆ ಕುರಿತು ಪರಿಶೀಲನೆ ನಡೆಸಬೇಕು.
–ಮಹುವಾ ಮಾಜಿ, ಜೆಎಂಎಂ ಸಂಸದೆ
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಒಪ್ಪಲಾಗದು. ಸೇನೆಯಲ್ಲಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸಬೇಕು. ಅಗ್ನಿಪಥ ಯೋಜನೆ ಈ ವ್ಯವಸ್ಥೆಗೆ ಕೊನೆ ಹಾಡಲಿದೆ. ಯೋಜನೆ ವಿರುದ್ಧದ ನಮ್ಮ ಹೋರಾಟ ನಿಲ್ಲದು.
–ಡೋಲಾ ಸೇನ್, ಟಿಎಂಸಿಯ ರಾಜ್ಯಸಭಾ ಸಂಸದೆ
ಹಳೆಯ ನೇಮಕಾತಿ ಪದ್ಧತಿಯೇ ಉತ್ತಮ. ಅದು ಸೈನಿಕರಿಗೆ ಉತ್ತಮ ಭವಿಷ್ಯ ಹಾಗೂ ಅವರ ಕುಟುಂಬಗಳಿಗೆ ಭದ್ರತೆಯನ್ನು ಖಾತರಿಪಡಿಸುತ್ತಿತ್ತು.
–ಧರ್ಮೇಂದ್ರ ಯಾದವ್ ಸಮಾಜವಾದಿ ಪಕ್ಷ ನಾಯಕ
ಬಿಜೆ‍ಪಿ ಮುಖಂಡರ ಸಮರ್ಥನೆ
ಅಗ್ನಿಪಥ ಉತ್ತಮ ಯೋಜನೆ. ನನ್ನ ಮಗಳು ಕೂಡ ಸೇನೆ ಸೇರಲು ಸಿದ್ಧತೆ ನಡೆಸುತ್ತಿದ್ದಾಳೆ. ಯೋಜನೆ ಕುರಿತು ಯಾರೂ ಗೊಂದಲಕ್ಕೆ ಒಳಗಾಗಬಾರದು..
– ರವಿ ಕಿಶನ್‌ ಬಿಜೆಪಿ ಸಂಸದ
ಇಸ್ರೇಲ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕಡ್ಡಾಯವಿರುವಂತೆ  ಅಗ್ನಿಪಥ ಯೋಜನೆ ದೇಶದ ಯುವ ಜನರಲ್ಲಿ ರಾಷ್ಟ್ರಭಕ್ತಿ ತುಂಬುವ ಉದ್ದೇಶ ಹೊಂದಿದೆ.
–ಬ್ರಿಜಮೋಹನ್‌ ಅಗ್ರವಾಲ್‌, ಬಿಜೆಪಿ ಸಂಸದ

‘ಐಟಿಬಿಪಿಗೆ ಅಗ್ನಿವೀರರಿಂದ ಅನುಕೂಲ’

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಕಾವಲಿರುವ ಇಂಡೊ–ಟಿಬೆಟನ್ ಗಡಿ ಪೊಲೀಸ್‌ (ಐಟಿಬಿಪಿ) ಪಡೆಗೆ ಅಗ್ನಿವೀರರಿಂದ ಬಹಳ ಅನುಕೂಲವಾಗಲಿದೆ ಎಂದು ಐಟಿಬಿಪಿ ಪ್ರಧಾನ ನಿರ್ದೇಶಕ ರಾಹುಲ್‌ ರಸಗೋತ್ರ ಶುಕ್ರವಾರ ಹೇಳಿದ್ದಾರೆ. ಅವರ ಹೇಳಿಕೆ ಇರುವ ವಿಡಿಯೊವನ್ನು ಗೃಹ ಸಚಿವಾಲಯ ತನ್ನ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದೆ.

‘ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅಗ್ನಿವೀರರನ್ನು ಐಟಿಬಿಪಿಯಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದ ನಿಯಮಗಳಿಗೆ ಗೃಹ ಸಚಿವಾಲಯ ತಿದ್ದುಪಡಿ ತಂದಿದೆ. ವಯೋಮಿತಿ ಸಡಿಲಿಕೆ ಮತ್ತು ದೈಹಿಕ ಕ್ಷಮತೆ ಪರೀಕ್ಷೆಯಿಂದ ವಿನಾಯಿತಿ ಪಡೆಯಲು ಅರ್ಹತೆ ಇರಲಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.