ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ 9ನೇ ಸಭೆಯು ಶನಿವಾರ ನಡೆಯಲಿದೆ.
ಇದರ ಬೆನ್ನಲ್ಲೇ ನೀತಿ ಆಯೋಗವನ್ನು ರದ್ದುಪಡಿಸಬೇಕು. ಈ ಹಿಂದಿನ ಯೋಜನಾ ಆಯೋಗವನ್ನು ಮರುಸ್ಥಾಪಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
‘ನೀತಿ ಆಯೋಗವು ಅಧಿಕಾರಹಿತವಾಗಿದೆ. ಅದು ಕೇವಲ ಸಭೆಗಳನ್ನು ನಡೆಸುವುದಕ್ಕಷ್ಟೇ ಸೀಮಿತವಾಗಿದೆ’ ಎಂದು ದೂರಿದ್ದಾರೆ.
ಈಗಾಗಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಭೆ ಬಹಿಷ್ಕರಿಸುವುದಾಗಿ ಪ್ರಕಟಿಸಿದ್ದಾರೆ. ಬಜೆಟ್‌ನಲ್ಲಿ ತಮ್ಮ ರಾಜ್ಯಗಳಿಗೆ ಅನುದಾನ ಕಲ್ಪಿಸಿಲ್ಲ. ಹಾಗಾಗಿ, ತಾರತಮ್ಯ ಖಂಡಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಮತ್ತು ಪಂಜಾಬ್‌ನ ಎಎಪಿ ಸರ್ಕಾರದ ಮುಖ್ಯಮಂತ್ರಿಗಳು ಸಭೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
‘ವಿಕಸಿತ ಭಾರತ@2047’ ಎಂಬುದು ಈ ವರ್ಷದ ನೀತಿ ಆಯೋಗದ ಥೀಮ್ ಆಗಿದೆ. ಕೇಂದ್ರ ಸರ್ಕಾರವು ‘ಮೇಕಿಂಗ್ ಇಂಡಿಯಾ’ಕ್ಕೆ ಹೆಚ್ಚು ಒತ್ತು ನೀಡುವ ಗುರಿ ಹೊಂದಿದೆ.
ಮಮತಾ, ಹೇಮಂತ್ ಸೊರೇನ್ ಭಾಗಿ?
ಮಮತಾ ಬ್ಯಾನರ್ಜಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಭೆಯಲ್ಲಿ ಪಾಲ್ಗೊಂಡು ಬಜೆಟ್‌ನಲ್ಲಿನ ತಾರತಮ್ಯದ ಬಗ್ಗೆ ಪ್ರಧಾನಿ ಎದುರು ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರವೇ ಮಮತಾ ಅವರು ದೆಹಲಿಗೆ ಭೇಟಿ ನೀಡಬೇಕಿತ್ತು. ಕೊನೆಯ ಕ್ಷಣದಲ್ಲಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಅವರು ಪಾಲ್ಗೊಳ್ಳುವುದು ಖಚಿತವಾಗಿಲ್ಲ.
‘ಕೇಂದ್ರದ ತಾರತಮ್ಯ ಸರಿಯಲ್ಲ’
ಕೆಲವು ಪತ್ರಕರ್ತರ ಜೊತೆಗೆ ಮಾತನಾಡಿದ ಮಮತಾ ಬ್ಯಾನರ್ಜಿ ‘ನೀವು ನಿಮ್ಮ ಸ್ನೇಹಿತರಿಗೆ (ಮೈತ್ರಿಕೂಟ ಪಕ್ಷಗಳು) ವಿಶೇಷ ಪ್ಯಾಕೇಜ್ ನೀಡುವುದಿದ್ದರೆ ನಮ್ಮ ಅಭ್ಯಂತರವಿಲ್ಲ. ಆದರೆ ಇತರೆ ರಾಜ್ಯಗಳಿಗೆ ತಾರತಮ್ಯ ಎಸಗಬಾರದು. ಬಿಜೆಪಿ ಬೆಂಬಲಿಸಿರುವ ಪಕ್ಷಗಳಿಗೆ ಮಾತ್ರವೇ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಲಾಗಿದೆ’ ಎಂದು ದೂರಿದ್ದಾರೆ.
‘ನಾನು ಈ ಹಿಂದಿನ ಯೋಜನಾ ಆಯೋಗದ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಮತ್ತೆ ಅದು ಅಸ್ತಿತ್ವಕ್ಕೆ ಬರಬೇಕಿದೆ. ಹಿಂದೆ ರಾಜ್ಯ ಸರ್ಕಾರಗಳು ಮತ್ತು ಯೋಜನಾ ಆಯೋಗವು ಒಟ್ಟಾಗಿ ಕೆಲಸ ಮಾಡುತ್ತಿದ್ದವು. ಸದ್ಯ ನೀತಿ ಆಯೋಗದ ಮೇಲೆ ಅಂತಹ ನಂಬಿಕೆಯಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.