ನವದೆಹಲಿ: ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ವ್ಯವಸ್ಥೆ ‘ಇ–ರುಪೀ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ 4.30ಕ್ಕೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಸ್ವತಃ ಮೋದಿ ಅವರೇ ಟ್ವೀಟ್ ಮಾಡಿದ್ದಾರೆ.
‘ಡಿಜಿಟಲ್ ತಂತ್ರಜ್ಞಾನವು ಜೀವನವನ್ನು ಮುಖ್ಯವಾದ ರೀತಿಯಲ್ಲಿ ಪರಿವರ್ತಿಸುತ್ತಿದೆ. ಬಳಕೆದಾರರಿಗೆ ಹಲವು ಪ್ರಯೋಜನಗಳನ್ನು ಒದಗಿಸಬಲ್ಲ, ಸರಳವಾದ ಡಿಜಿಟಲ್ ಪಾವತಿ ವ್ಯವಸ್ಥೆ ‘ಇ–ರುಪೀ’ಗೆ ನಾಳೆ (ಸೋಮವಾರ) ಸಂಜೆ ಚಾಲನೆ ದೊರೆಯಲಿದೆ’ ಎಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ನಗದುರಹಿತ, ಸಂಪರ್ಕರಹಿತ ಡಿಜಿಟಲ್ ಪಾವತಿ, ಸೇವಾ ಪ್ರಾಯೋಜಕರು ಹಾಗೂ ಫಲಾನುಭವಿಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸುವುದು, ವಿವಿಧ ಕಲ್ಯಾಣ ಸೇವೆಗಳು ಸೋರಿಕೆರಹಿತವಾಗಿ ಫಲಾನುಭವಿಗಳನ್ನು ತಲುಪುವಂತೆ ಮಾಡುವುದು ಈ ವ್ಯವಸ್ಥೆಯ ಕೆಲವು ಪ್ರಯೋಜನಗಳು ಎಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಏನಿದು ಇ–ರುಪೀ?
‘ಇದು ನಗದುರಹಿತ, ಸಂಪರ್ಕರಹಿತ ಡಿಜಿಟಲ್ ಪಾವತಿ ವ್ಯವಸ್ಥೆ. ಕ್ಯುಆರ್ ಕೋಡ್ ಅಥವಾ ಎಸ್‌ಎಂಸ್ ಆಧಾರಿತ ಇ–ವೋಚರ್. ಇದನ್ನು ಫಲಾನುಭವಿಯ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಈ ತಡೆರಹಿತ ಒನ್-ಟೈಮ್ ಪಾವತಿ ಕಾರ್ಯವಿಧಾನದ ಮೂಲಕ ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸದೇ, ಸೇವಾ ಪೂರೈಕೆದಾರರಿಂದ ವೋಚರ್ ಅನ್ನು ರಿಡೀಮ್ ಮಾಡಬಹುದಾಗಿದೆ. ರಾಷ್ಟ್ರೀಯ ಪಾವತಿ ನಿಗಮವು ತನ್ನ ಯುಪಿಐ ವ್ಯವಸ್ಥೆಯಲ್ಲೇ ಇದನ್ನು ಅಭಿವೃದ್ಧಿಪಡಿಸಿದೆ. ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.