ADVERTISEMENT

ವಧುವಿನಂತೆ ಸಿಂಗಾರಗೊಂಡ ಅಯೋಧ್ಯೆ ವಿಮಾನ ನಿಲ್ದಾಣ: ನಾಳೆ ಮೋದಿಯಿಂದ ಉದ್ಘಾಟನೆ

ಪಿಟಿಐ
Published 29 ಡಿಸೆಂಬರ್ 2023, 11:38 IST
Last Updated 29 ಡಿಸೆಂಬರ್ 2023, 11:38 IST
<div class="paragraphs"><p>ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೃಶ್ಯ</p></div>

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೃಶ್ಯ

   

–ಪಿಟಿಐ ಚಿತ್ರ

ಅಯೋಧ್ಯೆ: ಶನಿವಾರ ಇಲ್ಲಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಅಯೋಧ್ಯೆ ಸಜ್ಜಾಗಿದೆ. ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆಯೇ ನಗರವು ಹೂವಿನಿಂದ ಅಲಂಕೃತಗೊಂಡಿದೆ, ಗೋಡೆಗಳ ಮೇಲೆ ವರ್ಣಚಿತ್ರಗಳು ಮೈದಳೆದಿವೆ. 

ADVERTISEMENT

ನಗರದಲ್ಲಿ ಎರಡ ದಿನಗಳಿಂದ ದಟ್ಟ ಮಂಜು ಕವಿದ ವಾತಾವರಣ ಇದ್ದರೂ ಪ್ರಧಾನಿ ಭೇಟಿಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ ಎಂದು  ಅಯೋಧ್ಯೆಯ ವಿಭಾಗಾಧಿಕಾರಿ ಗೌರವ್‌ ದಯಾಳ್‌ ತಿಳಿಸಿದರು.

ಅಯೋಧ್ಯೆಯಲ್ಲಿ ಮರುಅಭಿವೃದ್ಧಿಯಾಗಿರುವ ರೈಲು ನಿಲ್ದಾಣ ಮತ್ತು ಹೊಸ ವಿಮಾನನಿಲ್ದಾಣದ ಉದ್ಘಾಟನೆಗಾಗಿ ಮೋದಿ ಅವರು ಶನಿವಾರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದ ಬಳಿ ಅವರು ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

‘ಪ್ರಧಾನಿ ಅವರು ಬೆಳಿಗ್ಗೆ 10.45ರ ವೇಳೆಗೆ ವಿಮಾನನಿಲ್ದಾಣ ತಲುಪುವ ನಿರೀಕ್ಷೆ ಇದೆ. ನಂತರ ಅವರು ರೈಲು ನಿಲ್ದಾಣ ಉದ್ಘಾಟಿಸುವರು. ಮತ್ತೆ ವಿಮಾನನಿಲ್ದಾಣಕ್ಕೆ ಬಂದು ಹೊಸದಾಗಿ ನಿರ್ಮಿಸಿರುವ ವಿಮಾನ ನಿಲ್ದಾಣವನ್ನು ಉದ್ಘಾಟಿಸುವರು. ಬಳಿಕ ‘ಜನ ಸಭಾ’ (ರ್‍ಯಾಲಿ)ದಲ್ಲಿ ಮಾತನಾಡುವರು ಎಂದು ದಯಾಳ್‌ ಅವರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದರು.

ಎರಡು ಹೊಸ ಅಮೃತ್ ಭಾರತ್‌ ಮತ್ತು ಆರು ಹೊಸ ವಂದೇ ಭಾರತ್‌ ರೈಲುಗಳಿಗೆ ಮೋದಿ ಅವರು ಇದೇ ವೇಳೆ ಹಸಿರು ನಿಶಾನೆ ತೋರುವರು. ರ್‍ಯಾಲಿಯಲ್ಲಿ 1.5 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಒಂದು ತಾಸು ಅವಧಿಯ ರ್‍ಯಾಲಿ ಬಳಿಕ ಅವರು ಅಯೋಧ್ಯೆಯಿಂದ ತೆರಳುವರು ಎಂದೂ ಹೇಳಿದರು.

ವಿಮಾನನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಪ್ರಧಾನಿ ಸಾಗುವ ರಾಮ ಪಥ ಮತ್ತ ಇತರ ರಸ್ತೆಗಳಿಗೆ ತಾತ್ಕಾಲಿಕ ಬ್ಯಾರಿಕೇಡ್‌ ಹಾಕುವ ಕಾರ್ಯ ಗುರುವಾರದಿಂದ ನಡೆಯುತ್ತಿದೆ. ವಿಮಾನನಿಲ್ದಾಣ ಮತ್ತು ರೈಲು ನಿಲ್ದಾಣದ ನಡುವೆ ಸ್ವಲ್ಪ ದೂರದವರೆಗೆ ಮೋದಿ ಅವರು ರೋಡ್‌ ಶೋ ಕೈಗೊಳ್ಳುವರು ಎಂದು ಮೂಲಗಳು ಹೇಳಿವೆ.

ಅಯೋಧ್ಯೆಯಲ್ಲಿ ₹ 11,100 ಕೋಟಿಗೂ ಹೆಚ್ಚಿನ ಮೊತ್ತದ ನಾಗರಿಕ ಸೌಲಭ್ಯಗಳ ನವೀಕರಣ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಯೋಜನೆಗಳಿಗೆ ಹಾಗೂ ಉತ್ತರ ಪ್ರದೇಶದ ಇತರ ಭಾಗಗಳಿಗೆ ₹4,600 ಕೋಟಿ ಮೊತ್ತದ ಯೋಜನೆಗಳಿಗೆ ಕೂಡ ಚಾಲನೆ ನೀಡುವರು.

* ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿ ಅಯೋಧ್ಯಾ ಧಾಮ್‌ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು.

* ಅಯೋಧ್ಯೆಯಲ್ಲಿ ಮೋದಿ ಅವರನ್ನು ದೇಶದ ವಿವಿಧೆಡೆಯ 1,400 ಕಲಾವಿದರು ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ  ಸ್ವಾಗತಿಸಲಿದ್ದಾರೆ. ಇದಕ್ಕಾಗಿ ವಿಮಾನನಿಲ್ದಾಣದಿಂದ ರೈಲು ನಿಲ್ದಾಣದವರೆಗೆ 40 ವೇದಿಕೆಗಳನ್ನು ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.