ಚಂಡೀಗಡ/ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರಕ್ಕೆ ಬುಧವಾರ ಭೇಟಿ ನೀಡಿದ್ದ ವೇಳೆ ಉಂಟಾಗಿದ್ದ ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಲು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಪಂಜಾಬ್ ಸರ್ಕಾರ ರಚಿಸಿದೆ.
ಕೇಂದ್ರ ಗೃಹ ಸಚಿವಾಲಯವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಕೇಂದ್ರ ಸಂಪುಟ ಕಾರ್ಯಾಲಯದ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ, ಗುಪ್ತಚರ ಬ್ಯೂರೊದ ಜಂಟಿ ನಿರ್ದೇಶಕ ಬಲಬೀರ್ ಸಿಂಗ್ ಮತ್ತು ಎಸ್‌ಪಿಜಿಯ ಮಹಾ ನಿರೀಕ್ಷಕ ಎಸ್. ಸುರೇಶ್ ಸಮಿತಿಯಲ್ಲಿ ಇದ್ದಾರೆ. ಸಾಧ್ಯವಾದಷ್ಟು ಬೇಗ ವರದಿ ನೀಡಲು ಸಮಿತಿಗೆ ಸೂಚಿಸಲಾಗಿದೆ.
ರಾಜ್ಯದ ಸಮಿತಿಯಲ್ಲಿ ನ್ಯಾಯಮೂರ್ತಿ (ನಿವೃತ್ತ) ಮೆಹತಾಬ್ ಸಿಂಗ್ ಗಿಲ್ ಮತ್ತು ಗೃಹ ವ್ಯವಹಾರಗಳು ಮತ್ತು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ ಅವರು ಸದಸ್ಯರಾಗಿದ್ದಾರೆ. ಸಮಿತಿಯು ಮೂರು ದಿನಗಳಲ್ಲಿ ವರದಿ ನೀಡಲಿದೆ.
ಪ್ರಧಾನಿಯ ಭದ್ರತೆಗಾಗಿ ರಾಜ್ಯ ಸರ್ಕಾರವು ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಆರೋಪಿಸಿದೆ. ಲೋಪಕ್ಕೆ ಕಾರಣವೇನು ಎಂಬ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸಿದೆ. ಪ್ರಧಾನಿಯ ಭದ್ರತೆಯಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿಯ ಭೇಟಿ ಸಂದರ್ಭದಲ್ಲಿ ಭದ್ರತೆಯಲ್ಲಿ ಲೋಪ ಉಂಟಾಗಿಲ್ಲ. ಇದರ ಹಿಂದೆ ರಾಜಕೀಯ ಉದ್ದೇಶ ಇದ್ದಂತೆ ಕಾಣಿಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿಯಾಗಿ ತಮ್ಮ ಭದ್ರತೆಯಲ್ಲಿ ಆಗಿರುವ ಲೋಪದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿಯ ಭದ್ರತೆಯಲ್ಲಿ ಆಗಿರುವ ಲೋಪಕ್ಕೆ ಕೋವಿಂದ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.