ನವದೆಹಲಿ: ಭಯೋತ್ಪಾದನೆ ಮತ್ತು ವಿಸ್ತರಣವಾದ ಎಂಬ ಎರಡು ಸವಾಲುಗಳ ವಿರುದ್ಧ ಭಾರತ ಹೋರಾಡುತ್ತಿದೆ. ಇವುಗಳನ್ನು ಸಮರ್ಥವಾಗಿ ಮತ್ತು ನಿರ್ಬಂಧಿತ ಮಾದರಿಯಲ್ಲಿ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದರು.
ಪಾಕಿಸ್ತಾನ ಮತ್ತು ಚೀನಾದಿಂದ ದೇಶ ಎದುರಿಸುತ್ತಿರುವ ಭದ್ರತಾ ಮತ್ತು ಸಾರ್ವಭೌಮತೆಯ ಸವಾಲುಗಳ ಕುರಿತು ಸೂಚ್ಯವಾಗಿ ಅವರು ಮಾತನಾಡಿದರು. ಇಡೀ ಪ್ರಪಂಚ ಭಾರತವನ್ನು ಈಗ ಬೇರೆಯದೇ ದೃಷ್ಟಿಕೋನದಲ್ಲಿ ನೋಡುತ್ತಿದೆ.ಭಾರತ ತನ್ನ ಹೊಣೆಯನ್ನು ಸಂಪೂರ್ಣಗೊಳಿಸಬೇಕು ಎಂದರೆ ನಮ್ಮ ಭದ್ರತಾ ತಯಾರಿ ಕೂಡಾ ದೃಢವಾಗಿರಬೇಕು ಎಂದರು.
ಭಾರತೀಯ ಸೇನೆ ಶತ್ರುಗಳನ್ನು ಎದುರಿಸುತ್ತಿರುವ ರೀತಿಯನ್ನು ಕುರಿತು ಮಾತನಾಡಿದ ಅವರು, ಶತ್ರುಗಳಿಗೆನವ ಭಾರತ ಎಷ್ಟು ಅಪಾಯಕಾರಿಯಾಗಿರಲಿದೆ ಎಂಬುದನ್ನು ನಾವುನಿರ್ದಿಷ್ಟ ದಾಳಿ ಮತ್ತು ವಾಯುದಾಳಿಗಳನ್ನು ನಡೆಸುವುದರ ಮೂಲಕ ತೋರಿಸಿದ್ದೇವೆ. 2016ರ ಸೆಪ್ಟಂಬರ್‌ನಲ್ಲಿ (ಉರಿ ದಾಳಿ) ಗಡಿ ನಿಯಂತ್ರಣ ರೇಖೆ ಬಳಿಯ ಉಗ್ರರ ಶಿಬಿರದ ಮೇಲೆ ಭಾರತ ದಾಳಿ ಮಾಡಿತ್ತು. 2019ರ ಫೆಬ್ರುವರಿಯಲ್ಲಿ (ಬಾಲಾಕೋಟ್ ದಾಳಿ) ಪಾಕಿಸ್ತಾನದ ಗಡಿ ಒಳಗಿದ್ದ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿತ್ತು. ಈ ಮೂಲಕ ಭಾರತ ಬದಲಾಗುತ್ತಿದೆ ಮತ್ತು ಎಂತಹ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.
ದೇಶವನ್ನು ರಕ್ಷಿಸುತ್ತಿರುವ ನಮ್ಮ ಸೇನಾ ಪಡೆಯ ಕೈ ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಅವಕಾಶಗಳನ್ನೂ ನಮ್ಮ ದೇಶ ಬಳಸಿಕೊಳ್ಳುತ್ತದೆ ಎಂದು ನಾನು ಭರವಸೆ ಕೊಡುತ್ತೇನೆ. ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೇನಾ ಪಡೆ ಮತ್ತು ನ್ಯಾಟೊ ಪಡೆಗಳನ್ನು ಹಿಂದೆ ಪಡೆದ ಬಳಿಕ ಅಲ್ಲಿ ತಾಲಿಬಾನ್ ಮೇಲುಗೈ ಸಾಧಿಸುತ್ತಿದೆ. ಇದರಿಂದ ಪಾಕಿಸ್ತಾನದ ತಂತ್ರಗಾರಿಕೆಗೆ ಬಲ ಸಿಗಬಹುದು ಎಂಬ ಆತಂಕವೂ ಇದೆ. ಪಾಕಿಸ್ತಾನದ ಭಾರತ ವಿರೋಧಿ ಉಗ್ರರರಿಗೆ ತಾಲಿಬಾನ್ ಈ ಹಿಂದೆ ಬೆಂಬಲ ನೀಡಿತ್ತು. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಅಪಹರಿಸಲೂ ಸಹಕಾರ ನೀಡಿತ್ತು ಎಂದು ಅವರು ಹೇಳಿದರು.
ಮಿಲಿಟರಿ ಸಲಕರಣೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ವದೇಶಿ ಯಂತ್ರೋಪಕರಣ ಉದ್ಯಮಗಳು ಮತ್ತು ದೇಶೀಯ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಮೂಲಕ ಭದ್ರತಾ ವಲಯವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
‘ಸಣ್ಣ ಹಿಡುವಳಿಯೇ ಸವಾಲು’
ರೈತರ ಹಿಡುವಳಿ (ಹೊಲ) ಗಾತ್ರ ಕುಗ್ಗುತ್ತಿರುಉದು ಬಹುದೊಡ್ಡ ಸವಾಲು. ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಬೇಕಿದೆ. ಒಟ್ಟು ರೈತ ಸಮುದಾಯದಲ್ಲಿ ಸಣ್ಣ ರೈತರ ಪ್ರಮಾಣವು ಶೇ 80ರಷ್ಟಿದೆ ಎಂದು ಪ್ರಧಾನಿ ಹೇಳಿದ್ಧಾರೆ.
ಸಣ್ಣ ರೈತರು ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿದ್ದಾರೆ. ಅದೂ ಅಲ್ಲದೆ, ಜಮೀನಿನ ಗಾತ್ರವು ಇನ್ನಷ್ಟು ಸಣ್ಣದಾಗುತ್ತಿದೆ. ಕುಟುಂಬಗಳ ವಿಭಜನೆ ಮತ್ತು ಜನಸಂಖ್ಯೆ ಹೆಚ್ಚಳ ಇದಕ್ಕೆ ಕಾರಣ. ಈ ಹಿಂದಿನ ಸರ್ಕಾರಗಳಂತೆರ ಅಲ್ಲದೆ, ಈಗಿನ ಸರ್ಕಾರವು ಸಣ್ಣ ರೈತರ ಮೇಲೆ ಗಮನ ಕೇಂದ್ರೀಕರಿಸಿದೆ. ಪಿಎಂ–ಕಿಸಾನ್, ಫಸಲ್ ಬಿಮಾ ಯೋಜನೆ ರೀತಿಯ ಕಾರ್ಯಕ್ರಮಗಳನ್ನು ಸರ್ಕಾರವು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಸಣ್ಣ ರೈತರನ್ನು ದೇಶದ ಹೆಮ್ಮೆಯಾಗಿ ಪರಿವರ್ತಿಸುವುದು ತಮ್ಮ ಗುರಿ. ಸಣ್ಣ ರೈತರು ಸಾಮೂಹಿಕ ಶಕ್ತಿ ಹೆಚ್ಚಳವಾಗಬೇಕು. ಅದಕ್ಕಾಗಿ ಅವರಿಗೆ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರಧಾನಿ ವಿವರಿಸಿದರು.
ಸಣ್ಣ ರೈತರನ್ನು ಗಮನದಲ್ಲಿ ಇರಿಸಿಕೊಂಡೇ ಹೊಸ ಕೃಷಿ ನೀತಿ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವು ಸಹಕಾರಿ ಸ್ಫೂರ್ತಿ ಮತ್ತು ಸಂಸ್ಕೃತಿಯನ್ನು ಬಲಪಡಿಸಲಿದೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನದ ಅನುಕೂಲಗಳನ್ನು ಪಡೆದುಕೊಳ್ಳಲು ಕೃಷಿ ಕ್ಷೇತ್ರವು ಇನ್ನಷ್ಟು ಕಾಲ ಕಾಯಲು ಸಾಧ್ಯವಿಲ್ಲ. ನಮ್ಮ ವಿಜ್ಞಾನಿಗಳ ಶಕ್ತಿ ಮತ್ತು ಬದ್ಧತೆಯನ್ನು, ತಂತ್ರಜ್ಞಾನದ ಪ್ರಭಾವವನ್ನು ಕೋವಿಡ್–19ರ ಸಂದರ್ಭದಲ್ಲಿ ಎಲ್ಲರೂ ನೋಡಿದ್ದಾರೆ ಎಂದರು.
ಲಸಿಕೆಗೆ ಶ್ಲಾಘನೆ:ಕೋವಿಡ್ ವಿರುದ್ಧ ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಅಭಿಯಾನ ನಡೆಸಿರುವುದಕ್ಕೆ ಭಾರತವು ಹೆಮ್ಮೆ ಪಡಬಹುದಾಗಿದೆ. ಈವರೆಗೆ 54 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ ವಿಜ್ಞಾನಿಗಳು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಇತರರನ್ನು ಮೋದಿ ಶ್ಲಾಘಿಸಿದರು.
ಲಸಿಕೆ ತಯಾರಿಕಾ ಕಂಪನಿಗಳನ್ನೂ ಮೋದಿ ಹೊಗಳಿದರು. ಈ ಕಂಪನಿಗಳ ಶ್ರಮದಿಂದಾಗಿ ಭಾರತವು ಬೇರೆಯವರನ್ನು ಅವಲಂಬಿಸಬೇಕಾಗಿ ಬರಲಿಲ್ಲ ಎಂದರು.ಭಾರತವು ತನ್ನದೇ ಆದ ಲಸಿಕೆ ಅಭಿವೃದ್ಧಿಪಡಿಸದೇ ಇದ್ದಿದ್ದರೆ ಹೊರಗಿನಿಂದ ಬರುವ ಲಸಿಕೆಗಳ ಪೂರೈಕೆಯು ಅನಿಶ್ಚಿತವಾಗಿ ಇರುತ್ತಿತ್ತು ಎಂದರು.
75 ವಂದೇ ಭಾರತ ರೈಲುಗಳ ಓಡಾಟ
2023ರ ಆಗಸ್ಟ್ 15ರ ಒಳಗೆ ದೇಶದಲ್ಲಿ 75 ವಂದೇ ಭಾರತ ಅತ್ಯಾಧುನಿಕ ರೈಲುಗಳನ್ನು ಓಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಘೋಷಣೆ ಮಾಡಿದರು.
ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳನ್ನು ವಂದೇ ಭಾರತ ರೈಲುಗಳು ಸಂಪರ್ಕಿಸಲಿವೆ. ಜೊತೆಗೆ, ಈಶಾನ್ಯ ರಾಜ್ಯಗಳನ್ನು ದೆಹಲಿಗೆ ಸಂಪರ್ಕಿಸುವ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳುವುದು ಎಂದರು.
ಸದ್ಯ ದೇಶೀಯವಾಗಿ ನಿರ್ಮಿಸಲಾಗಿರುವ ಮಧ್ಯಮ ವೇಗದ ಎರಡು ವಂದೇ ಭಾರತ ರೈಲುಗಳು ಓಡಾಡುತ್ತಿವೆ. ವಾರಾಣಸಿಯಿಂದ ದೆಹಲಿ, ಕತ್ರಾದಿಂದ ದೆಹಲಿ ನಡುವೆ ಈ ರೈಲುಗಳು ಸಂಚರಿಸುತ್ತಿವೆ. 2022ರ ಆಗಸ್ಟ್ ಒಳಗೆ 40 ನಗರಗಳ ಮಧ್ಯೆ ಸಂಪರ್ಕ ಸಾಧಿಸುವ ಸುಮಾರು 10 ರೈಲುಗಳ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.