ನವದೆಹಲಿ : ‘ಎಲ್ಲರ ಜತೆಗೆ ಎಲ್ಲರ ಏಳ್ಗೆ’ ಎಂಬ ಘೋಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯೋತ್ಸವದ ದಿನದಂದು ‘ಎಲ್ಲರ ಪ್ರಯತ್ನ’ ಎಂಬುದನ್ನು ಹೊಸದಾಗಿ ಸೇರಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಮಾಡಿದ ಭಾಷಣದ ಉದ್ದಕ್ಕೂ ಹಲವು ಹೊಸ, ಆಕರ್ಷಕ ಘೋಷಣೆಗಳು ಇದ್ದವು.
ಯುವ ಜನರ ಬಗ್ಗೆ ಅವರ ಒಲವು ಭಾಷಣದ ಉದ್ದಕ್ಕೂ ವ್ಯಕ್ತವಾಯಿತು. ಇದು ‘ಏನನ್ನಾದರೂ ಮಾಡಬಲ್ಲೆವು, ಎಲ್ಲ ಗುರಿಗಳನ್ನು ಸಾಧಿಸಬಲ್ಲೆವು’ ಎಂಬ ತಲೆಮಾರಾಗಿದೆ ಎಂದು ಮೋದಿ ಕೊಂಡಾಡಿದರು.
90 ನಿಮಿಷಗಳ ತಮ್ಮ ಭಾಷಣದಲ್ಲಿ ಅವರು, ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ದೇಶವು (ನಯಾ ಭಾರತ್) ಹೇಗಿರಬೇಕು ಎಂಬುದರ ನೀಲನಕ್ಷೆಯನ್ನು ದೇಶದ ಜನರ ಮುಂದೆ ಬಿಚ್ಚಿಟ್ಟರು.
ಮುಂದಿನ 25 ವರ್ಷಗಳನ್ನು ‘ಅಮೃತ ಕಾಲ’ ಎಂದು ಅವರು ಬಣ್ಣಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯುತ್ತಮವಾದುದೇ ಆಗಬೇಕು, ಇದಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕು ಮತ್ತು ಈ ಗುರಿಗಳನ್ನು ಸಾಧಿಸಲು ದೇಶವು ಇನ್ನಷ್ಟು ಕಾಲ ಕಾಯಲಾಗದು ಎಂದು ಅವರು ಹೇಳಿದ್ದಾರೆ.
‘ಇದುವೇ ಆ ಕ್ಷಣ, ಇದು ಸರಿಯಾದ ಕ್ಷಣ ಮತ್ತು ಇದು ಭಾರತಕ್ಕೆ ಅತ್ಯಂತ ಮೌಲಿಕವಾದ ಕ್ಷಣ’ ಎಂದು ಕವಿತೆಯೊಂದನ್ನು ಉಲ್ಲೇಖಿಸುತ್ತಾ ತಮ್ಮ ಭಾಷಣದ ಕೊನೆಯಲ್ಲಿ ಅವರು ಹೇಳಿದರು.
ಮುಂದಿನ 25 ವರ್ಷಗಳ ನೀಲನಕ್ಷೆಯು ಕಾರ್ಯರೂಪಕ್ಕೆ ಬರಲು ದೇಶವು ಬದಲಾಗಬೇಕಿದೆ ಮತ್ತು ಅದಕ್ಕೆ ಅನುಗುಣವಾಗಿ ಜನರೂ ಬದಲಾಗಬೇಕಿದೆ. ‘ಎಲ್ಲರ ಪ್ರಯತ್ನ’ ಅನಿವಾರ್ಯವಾಗಿದೆ. ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಗುರಿಯನ್ನು ನಿಗದಿ ಮಾಡಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಪರಿಶ್ರಮ ಮತ್ತು ಪರಾಕ್ರಮದ ಗರಿಷ್ಠ ಮಟ್ಟವನ್ನು ಮುಟ್ಟುವುದರಿಂದ ಇವೆಲ್ಲವೂ ಸಾಧ್ಯ ಎಂಬ ಭರವಸೆಯನ್ನು ಬಿತ್ತಲು ಮೋದಿ ಯತ್ನಿಸಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳನ್ನು ಮೋದಿ ಉಲ್ಲೇಖಿಸಿದರು. ನೇರ ನಗದು ವರ್ಗಾವಣೆಯೂ ಅದರಲ್ಲಿ ಪ್ರಮುಖವಾಗಿತ್ತು. ಸಣ್ಣ ರೈತರಿಗೆ ಸರ್ಕಾರವು ಹೆಚ್ಚು ಗಮನ ನೀಡುತ್ತಿದೆ ಎಂಬುದನ್ನು ಮನದಟ್ಟು ಮಾಡಲು ಪ್ರಧಾನಿ ಯತ್ನಿಸಿದ್ದಾರೆ. ‘ಸಣ್ಣ ರೈತರು ದೇಶದ ಹೆಮ್ಮೆ’ ಎಂಬ ಹೊಸ ಘೋಷಣೆಯನ್ನೂ ಅವರು ಕೊಟ್ಟಿದ್ದಾರೆ.
ಮುಂದಿನ 25 ವರ್ಷಗಳು ಭಾರತದ ಪಾಲಿಗೆ ಭವ್ಯವಾಗಿರಲಿದೆ. ಅದು ದೇಶವನ್ನು ಮೂಲಸೌಕರ್ಯದಲ್ಲಿ ಜಗತ್ತಿನಲ್ಲಿಯೇ ಆಧುನಿಕವಾಗಿಸಲಿದೆ, ಹೊಸ ಭಾರತದಲ್ಲಿ ನಗರ ಮತ್ತು ಗ್ರಾಮ ಎಂಬ ವಿಭಜನೆಯೂ ಇರದು ಎಂದು ತಮ್ಮ ಸತತ 8ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಹೇಳಿದ್ದಾರೆ.
ಪ್ರಧಾನಿ ಪ್ರತಿಪಾದನೆ
* ಪೂರ್ವ, ಈಶಾನ್ಯ, ಜಮ್ಮು–ಕಾಶ್ಮೀರ, ಲಡಾಖ್, ಇಡೀ ಹಿಮಾಲಯ ಪ್ರದೇಶ, ಕರಾವಳಿ ಪ್ರದೇಶ, ಬುಡಕಟ್ಟು ಪ್ರದೇಶ ಎಲ್ಲವೂ ಭಾರತದ ಭವಿಷ್ಯದ ಅಭಿವೃದ್ಧಿಗೆ ಬಹುದೊಡ್ಡ ನೆಲೆ ಆಗಲಿದೆ
*ನೀವು ತಯಾರಿಸುವ ಪ್ರತಿ ವಸ್ತುವೂ ಭಾರತದ ರಾಯಭಾರಿಯಾಗಿದೆ. ಉತ್ಪನ್ನವು ಎಲ್ಲಿಯವರೆಗೆ ಉಪಯುಕ್ತವೋ ಅಲ್ಲಿವರೆಗೆ ಬಳಕೆದಾರನು ಇದು ಭಾರತದ ಉತ್ಪನ್ನ ಎನ್ನುತ್ತಾನೆ ಎಂಬುದು ಗಮನದಲ್ಲಿ ಇರಲಿ ಎಂಬುದು ತಯಾರಕರಿಗೆ ನೆನಪಿಸಲು ಬಯಸುತ್ತೇನೆ
* ನೀತಿಯನ್ನು ಸಂಕೀರ್ಣಗೊಳಿಸುವ ಸರ್ಕಾರಿ ಹಸ್ತಕ್ಷೇಪವನ್ನು ತಗ್ಗಿಸಬೇಕಿದೆ. ಇಂತಹ 15 ಸಾವಿರ ಅಂಶಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಸುಲಲಿತ ಬದುಕು ಮತ್ತು ಸುಲಲಿತ ವ್ಯಾಪಾರಕ್ಕಾಗಿ ತೆರಿಗೆ ಸುಧಾರಣೆಗಳನ್ನು ಮಾಡಿದ್ಧೇವೆ
* ಇಂಧನದ ವಿಚಾರದಲ್ಲಿ ಭಾರತವು ಸ್ವಾವಲಂಬಿ (ಆತ್ಮನಿರ್ಭರ) ಆಗಿಲ್ಲ. ಪ್ರತಿ ವರ್ಷ ತೈಲ ಆಮದಿಗಾಗಿ ₹12 ಲಕ್ಷ ಕೋಟಿ ವೆಚ್ಚ ಆಗುತ್ತಿದೆ. ಈ ವಿಷಯದಲ್ಲಿ ಆತ್ಮನಿರ್ಭರ ಆಗಬೇಕಿದೆ
* ರಾಷ್ಟ್ರೀಯ ಹೈಡ್ರೋಜನ್ ಮಿಷನ್‌ಗೆ ಚಾಲನೆ ಕೊಡಲಾಗುವುದು
* 2030ರ ಹೊತ್ತಿಗೆ ರೈಲ್ವೆಯ ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಗುರಿ
* ಕೊಡಗು ಮತ್ತು ವಿಜಯಪುರದ ಸೈನಿಕ ಶಾಲೆಯ ರೀತಿಯಲ್ಲಿಯೇ ದೇಶದ ಎಲ್ಲ ಸೈನಿಕ ಶಾಲೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಲಾಗುವುದು. ಪ್ರಾಯೋಗಿಕ ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಿಕೆಯನ್ನು ಕೆಲವು ಶಾಲೆಗಳಲ್ಲಿ 2018–19ರಲ್ಲಿ ಆರಂಭಿಸಲಾಗಿತ್ತು
₹100 ಲಕ್ಷ ಕೋಟಿಯ ‘ಗತಿಶಕ್ತಿ’ ಯೋಜನೆ:
ಉದ್ಯೋಗ ಅವಕಾಶಗಳನ್ನು, ಕೈಗಾರಿಕೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ‘ಗತಿಶಕ್ತಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಕಟಿಸಿದರು. ಈ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ₹ 100 ಲಕ್ಷ ಕೋಟಿ ವೆಚ್ಚ ಮಾಡುವ ಗುರಿ ಇರುವುದಾಗಿ ತಿಳಿಸಿದರು.
‘ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಯೋಜನೆಯನ್ನು ದೇಶವು ಶೀಘ್ರದಲ್ಲಿಯೇ ಜಾರಿಗೊಳಿಸಲಿದೆ’ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದರು.
‘ಗತಿಶಕ್ತಿ’ಯು ಇಡೀ ದೇಶದಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕುವ ಮಹಾಯೋಜನೆ. ಇದು ಅರ್ಥ ವ್ಯವಸ್ಥೆಗೆ ಸಮಗ್ರ, ಎಲ್ಲವನ್ನೂ ಒಳಗೊಳ್ಳುವ ಪಥವೊಂದನ್ನು ಹಾಕಿಕೊಡುತ್ತದೆ’ ಎಂದು ಹೇಳಿದರು.
‘ಗತಿಶಕ್ತಿ ಯೋಜನೆಯು ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ, ಕೈಗಾರಿಕೆಗಳಲ್ಲಿನ ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಶದ ತಯಾರಿಕಾ ವಲಯವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗುವಲ್ಲಿ ನೆರವಾಗಲಿದೆ’ ಎಂದು ವಿವರಿಸಿದರು. ಈ ಯೋಜನೆಯು ಭವಿಷ್ಯದಲ್ಲಿ ಆರ್ಥಿಕ ವಲಯಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.