ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಅವಿವಾಹಿತರು ಎಂದು ಮಧ್ಯಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ನೀಡಿರುವ ಹೇಳಿಕೆಗೆ ಮೋದಿ ಅವರ ಪತ್ನಿ ಜಶೋದಾಬೆನ್ ಕಿಡಿಕಾರಿದ್ದಾರೆ.
‘ನಾನು ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ. ಅವರ ಪತ್ನಿಯಾಗಿಯೇ ಉಳಿಯುತ್ತೇನೆ. ನಾನು ಅವರನ್ನು ಮದುವೆಯಾಗಿರುವುದು ಸತ್ಯ. ಇದು ಸತ್ಯವೇ ಹೊರತು ಸುಳ್ಳಲ್ಲ. ನನ್ನನ್ನು ಅವಮಾನಿಸುವುದು ಭಾರತದ ಪ್ರಧಾನಿಯನ್ನು ಅವಮಾನಿಸಿದಂತೆ’ ಎಂದು ಜಶೋದಾಬೆನ್ ನೀಡಿರುವ ಹೇಳಿಕೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅಂಗನವಾಡಿಯ ಕಾರ್ಯಕ್ರಮವೊಂದರಲ್ಲಿ ಆನಂದಿಬೆನ್ ಪಟೇಲ್ ಅವರು ಈ ವಿಷಯದ ಬಗ್ಗೆ ನೀಡಿದ್ದ ಹೇಳಿಕೆ ಸ್ಥಳೀಯ ಮಾಧ್ಯಮಗಳಲ್ಲಿಪ್ರಕಟವಾಗಿತ್ತು.
ನಿವೃತ್ತ ಶಿಕ್ಷಕಿಯೂ ಆಗಿರುವ ಜಶೋದಾಬೆನ್ ಅವರು ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾನು ಜಶೋದಾಬೆನ್ ನರೇಂದ್ರ ಮೋದಿ ನೀಡುವ ಹೇಳಿಕೆ ಏನೆಂದರೆ, ಸುಶಿಕ್ಷಿತರಾಗಿರುವ ಆನಂದಿಬೆನ್ ಪಟೇಲ್ ಅವರು ಒಬ್ಬ ಶಿಕ್ಷಕಿಯ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ. ಇಂತಹ ನಡವಳಿಕೆ ಸಲ್ಲದು. ಅವರ ಹೇಳಿಕೆ ಸಂಪೂರ್ಣ ಸುಳ್ಳು. ನನ್ನ ಪತಿ ರಾಮನಿದ್ದಂತೆ. ಅವರನ್ನು ನಿಂದಿಸುವುದನ್ನು ದಯವಿಟ್ಟು ನಿಲ್ಲಿಸಿ ಮತ್ತು ರಾಜಕೀಯ ಮಾಡಬೇಡಿ’ ಎಂದು ಹೇಳಿದ್ದಾರೆ.
‘2014ರಲ್ಲಿ ನರೇಂದ್ರ ಮೋದಿ ಅವರು ವಡೋದರಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ನಾಮಪತ್ರದಲ್ಲಿ ಸ್ಪಷ್ಟವಾಗಿ ತಮ್ಮ ಪತ್ನಿ ಎಂದು ನನ್ನ ಹೆಸರನ್ನು ಬರೆದಿದ್ದರು. ಅದರ ಪ್ರತಿಯೂ ನನ್ನ ಬಳಿ ಇದೆ’ ಎಂದು ತಿಳಿಸಿದ್ದಾರೆ.
ಈ ವಿಡಿಯೊಗಳ ಬಗ್ಗೆ ಪ್ರತಿಕ್ರಿಯಿಸಿರುವ ಜಶೋದಾಬೆನ್ ಅವರ ಸಹೋದರ ಅಶೋಕ್, ‘ಈ ಎಲ್ಲ ವಿಡಿಯೊಗಳು ನೈಜವಾಗಿವೆ. ಜಶೋದಾ ಅವರೇ ಹೇಳಿಕೆಯನ್ನು ಬರೆದು ಓದಿದ್ದಾರೆ. ದಿನಪತ್ರಿಕೆಯಲ್ಲಿ ವರದಿ ಬಂದ ಬಳಿಕ ಈ ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ವಿವರಿಸಿದರು.
ಉಂಝಾ ನಗರದಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿರುವ ಅಶೋಕ್ ಅವರು ಸಹ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಮೋದಿ ಉತ್ತಮ ವ್ಯಕ್ತಿ. ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ರಾಜಕೀಯಕ್ಕಾಗಿ ಅವರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.