ನವದೆಹಲಿ: ‘ಕೋವಿಡ್–19 ಬಿಕ್ಕಟ್ಟು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಮತ್ತು ಅಗತ್ಯವಿದ್ದಾಗಲೇ ಪ್ರಧಾನಿಯವರು ಕಾಣಿಸಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ಕೇಂದ್ರ ಸರ್ಕಾರ ಜನಪರವಾಗಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಅವರು ದೂರಿದ್ದಾರೆ.
ಪಿಎಂ ಕೇರ್ಸ್ ನಿಧಿ ಮೂಲಕ ನೀಡಿರುವ ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆ ಮತ್ತು ಪ್ರಧಾನಿ ಅವರ ಕಾರ್ಯವೈಖರಿಯನ್ನು ಹೋಲಿಕೆ ಮಾಡಿ ಅವರು ವ್ಯಂಗ್ಯವಾಡಿದ್ದಾರೆ.
ಪಿಎಂ ಕೇರ್ಸ್ ನಿಧಿ ಮೂಲಕ ನೀಡಲಾದ ವೆಂಟಿಲೇಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಂಜಾಬ್, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳು ದೂರಿವೆ.
‘ಪಿಎಂ ಕೇರ್ಸ್ ಮೂಲಕ ನೀಡಲಾದ ವೆಂಟಿಲೇಟರ್‌ಗಳು ಮತ್ತು ಸ್ವಯಂ ಪ್ರಧಾನಿ ಅವರ ನಡುವೆ ಸಾಮಾನ್ಯ ಹೋಲಿಕೆಗಳಿವೆ. ಸುಳ್ಳು ಪ್ರಚಾರ ಮಾಡುವುದು, ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡದಿರುವುದು, ಅಗತ್ಯವಿದ್ದಾಗ ಕಾಣಿಸಿಕೊಳ್ಳದಿರುವುದು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೈಯಕ್ತಿಕ ಮಟ್ಟದಲ್ಲಿ ನೆರವಾಗುತ್ತಿರುವವರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
‘ಇತರರ ಸೇವೆಯಲ್ಲಿ ತೊಡಗಿರುವ ಈ ಹೀರೊಗಳಿಗೆ ಧನ್ಯವಾದಗಳು. ಸಂಕಷ್ಟ ಕಾಲದಲ್ಲಿ ಭಾರತೀಯರು ಯಾವ ರೀತಿಯ ನೆರವು ನೀಡುತ್ತಾರೆ ಎನ್ನುವುದನ್ನು ಇವರು ಜಗತ್ತಿಗೆ ತೋರಿಸಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.